ಸಿಎಂ ಜಗನ್ (ಸಂಗ್ರಹ ಚಿತ್ರ)
ಸಿಎಂ ಜಗನ್ (ಸಂಗ್ರಹ ಚಿತ್ರ)

ಪ್ರವಾಹ ಪೀಡಿತರಿಗೆ ಉಚಿತ ರೇಷನ್, ಈರುಳ್ಳಿ, ಆಲೂಗೆಡ್ಡೆ, ಎಣ್ಣೆ ವಿತರಣೆ: ಆಂಧ್ರ ಪ್ರದೇಶ ಸರ್ಕಾರ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಉಚಿತ ರೇಷನ್ ಮತ್ತು ಅಗತ್ಯ ವಸ್ತುಗಳನ್ನು ನೀಡುವುದಾಗಿ ಆಂಧ್ರ ಪ್ರದೇಶ ಸರ್ಕಾರ ಮಂಗಳವಾರ ಘೋಷಣೆ ಮಾಡಿದೆ.
Published on

ನವದೆಹಲಿ: ಪ್ರವಾಹ (Andhra Floods) ಪೀಡಿತ ಪ್ರದೇಶಗಳಲ್ಲಿ ಉಚಿತ ರೇಷನ್ ಮತ್ತು ಅಗತ್ಯ ವಸ್ತುಗಳನ್ನು ನೀಡುವುದಾಗಿ ಆಂಧ್ರ ಪ್ರದೇಶ ಸರ್ಕಾರ (Andhra Pradesh Govt) ಮಂಗಳವಾರ ಘೋಷಣೆ ಮಾಡಿದೆ.

ಪ್ರವಾಹ ಪರಿಸ್ಥಿತಿ ಕುರಿತು ಸಿಎಂ ಜಗನ್ ಮೋಹನ್ ರೆಡ್ಡಿ (CM Jagan Mohan Reddy) ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಪ್ರವಾಹ ಪೀಡಿತ ಚಿತ್ತೂರು, ನೆಲ್ಲೂರು, ಕಡಪ ಮತ್ತು ಅನಂತಪುರ ಜಿಲ್ಲೆಗಳಲ್ಲಿ ಅಗತ್ಯ ವಸ್ತುಗಳಾದ ಅಕ್ಕಿ 25 ಕೆಜಿ, ಕೆಂಪು ಬೇಳೆ-1 ಕೆಜಿ, ಎಣ್ಣೆ 1 ಲೀಟರ್ / ಪ್ರತೀ ಕುಟುಂಬಕ್ಕೆ, ಈರುಳ್ಳಿ 1 ಕೆಜಿ, ಆಲೂಗಡ್ಡೆ 1 ಕೆ.ಜಿ. ಉಚಿತವಾಗಿ  ವಿತರಿಸಲು ನಿರ್ಧರಿಸಿದೆ.

ಸೇವೆಯಲ್ಲಿ ವಿಳಂಬ ಬೇಡ: ಸಿಎಂ ಜಗನ್ ಆದೇಶ
ಇನ್ನು ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, '‘ಪ್ರವಾಹ ಸಂತ್ರಸ್ತರಿಗೆ ಉದಾರವಾಗಿರಿ. ಪ್ರವಾಹಕ್ಕೆ ಒಳಗಾದ ಪ್ರತಿ ಮನೆಗೂ ಪರಿಹಾರ ನೀಡಬೇಕು. ಯಾರೂ ಪಡೆದಿಲ್ಲ ಎಂದು ಹೇಳಬಾರದು'' ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

'ಪರಿಹಾರ ಶಿಬಿರದಲ್ಲಿರುವವರಿಗೆ ಉತ್ತಮ ಸೌಲಭ್ಯ ಹಾಗೂ ಸೌಲಭ್ಯ ಕಲ್ಪಿಸಬೇಕು. ಕಷ್ಟದ ಸಮಯದಲ್ಲಿ ಸರ್ಕಾರ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಎಲ್ಲ ಅಧಿಕಾರಿಗಳು ಕ್ರಿಯಾಶೀಲರಾಗಿ ಕೆಲಸ ಮಾಡಿ ಸಮಸ್ಯೆಗಳಿದ್ದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು. ಅಲ್ಲದೆ ಪ್ರತೀ ಪ್ರವಾಹ ಪೀಡಿತ ಕುಟುಂಬಕ್ಕೆ 25 ಕೆಜಿ ಅಕ್ಕಿ, ಸೋಯಾಬೀನ್, ಈರುಳ್ಳಿ, ಆಲೂಗಡ್ಡೆ ತಲಾ ಒಂದೊಂದು ಕೆಜಿ, ಒಂದು ಲೀಟರ್ ಅಡುಗೆ ಎಣ್ಣೆಯನ್ನು ತಕ್ಷಣವೇ ಹಸ್ತಾಂತರಿಸುವಂತೆ ಆದೇಶಿಸಲಾಗಿದೆ. ಪರಿಹಾರ ಶಿಬಿರಗಳಿಂದ ಮನೆಗೆ ತೆರಳುವ ಪ್ರತಿ ವ್ಯಕ್ತಿಗೆ 2,000 ರೂ. ಮನೆ ಸಂಪೂರ್ಣ ನಾಶವಾದವರಿಗೆ 95,100 ರೂ., ಭಾಗಶಃ ಹಾನಿಗೊಳಗಾದ ಮನೆಗೆ 5,200 ರೂ. ಇದಕ್ಕಾಗಿ ಪ್ರತಿ ಜಿಲ್ಲೆಗೆ 10 ಕೋಟಿ ರೂ.ನಂತೆ ಇನ್ನೂ 40 ಕೋಟಿ ರೂ. ಹಣವನ್ನು ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರವಾಹ ಪೀಡಿತ ಕುಟುಂಬಗಳಿಗೆ 25 ಲಕ್ಷ ರೂ
ಪ್ರವಾಹ ಮತ್ತು ಮಳೆಯಿಂದ ಮೃತಪಟ್ಟವರ ಕುಟುಂಬಗಳಿಗೆ ಈಗಾಗಲೇ ಶೇ 90ರಷ್ಟು ಪರಿಹಾರ ನೀಡಲಾಗಿದೆ. ಉಳಿದ ಸಂತ್ರಸ್ತ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಬೇಕು. ನೆಲ್ಲೂರಿನಲ್ಲಿ ಮೃತಪಟ್ಟ ಕಾನ್‌ಸ್ಟೆಬಲ್, ಗ್ರಾಮ ಕಾರ್ಯದರ್ಶಿ ಹಾಗೂ ಆರ್‌ಟಿಸಿ ಕಂಡಕ್ಟರ್ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಅವರ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವಂತೆ ಸಿಎಂ ಜಗನ್ ಆದೇಶಿಸಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳಿಗೂ ಆಹಾರ ಒದಗಿಸಬೇಕು. ಜಾನುವಾರುಗಳು ಮೃತಪಟ್ಟಲ್ಲಿ ಪರಿಹಾರ ನೀಡಲು ಕ್ರಮಕೈಗೊಳ್ಳುವಂತೆ ಸೂಚಿಸಲಾಯಿತು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೈರ್ಮಲ್ಯ ನಿರ್ವಹಣೆ ಮತ್ತು ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಲು ಸಿಎಂ ಜಗನ್ ಅಧಿಕಾರಿಗಳಿಗೆ ಸೂಚಿಸಿದರು. ಹಾಳಾದ ರಸ್ತೆಗಳನ್ನು ಸರಿಪಡಿಸಲು ಮತ್ತು ಸಾರ್ವಜನಿಕ ಸಾರಿಗೆಯನ್ನು ಸಹಜ ಸ್ಥಿತಿಗೆ ತರಲು ತುರ್ತು ತಾತ್ಕಾಲಿಕ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಳ್ಳಬೇಕು. ಈಗ ಬಂದಿರುವ ಪ್ರವಾಹವನ್ನು ಗಮನದಲ್ಲಿಟ್ಟುಕೊಂಡು ಶಾಶ್ವತ ಕಾಮಗಾರಿಗಳಿಗೆ ವಿನ್ಯಾಸ ಮಾಡಬೇಕೆಂದರು. ಬೆಳೆ ಕಳೆದುಕೊಂಡ ರೈತರಿಗೆ ಶೇ.80ರಷ್ಟು ಸಬ್ಸಿಡಿಯಲ್ಲಿ ಬಿತ್ತನೆಬೀಜ ಪೂರೈಸಲು ಸೂಚಿಸಲಾಗಿದೆ. ಜಿಲ್ಲೆಗಳ 104 ಸಂಖ್ಯೆಗೆ ಯಾವುದೇ ಸಮಯದಲ್ಲಿ ಕರೆ ಮಾಡಿದವರು ತಕ್ಷಣ ಪ್ರತಿಕ್ರಿಯಿಸಬೇಕು.

ಅಧಿಕಾರಿಗಳಿಂದ ಪರಿಶೀಲನೆ
ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳು ಸೋಮವಾರ ಅಮರಾವತಿ ಸಚಿವಾಲಯದಿಂದ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆಯಾ ಜಿಲ್ಲೆಗಳ ಪರಿಹಾರ ಕಾರ್ಯಕ್ರಮಗಳ ಪ್ರಗತಿಯನ್ನು ಅವರು ವಿಚಾರಿಸಿದರು. ಮತ್ತೊಂದು ಕಡಿಮೆ ಒತ್ತಡದ ಎಚ್ಚರಿಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುವಂತೆ ಸಿಎಂ ಸೂಚಿಸಿದರು. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ ಎಂದು ಸಿಎಂ ಜಗನ್ ಆದೇಶಿಸಿದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com