26/11ರ ಮುಂಬೈ ಉಗ್ರರ ದಾಳಿಗೆ 13 ವರ್ಷ: ಹುತಾತ್ಮ ಯೋಧರನ್ನು ಕಳೆದುಕೊಂಡ ಕರಾಳ ದಿನ ನೆನೆದ ಕೇಂದ್ರದ ನಾಯಕರು

ಭಾರತದಲ್ಲಿ ಕರಾಳ ಅಧ್ಯಾಯ ಬರೆದ 26/11 2008ರಮುಂಬೈ ಭಯೋತ್ಪಾದಕ ದಾಳಿಗೆ 13 ವರ್ಷಗಳು ಕಳೆದಿದ್ದು, ಅಮಾಯಕ ಜನರು, ಹುತಾತ್ಮ ಯೋಧರನ್ನು ಕಳೆದುಕೊಂಡ ಕರಾಳ ದಿನವನ್ನು ದೇಶದ ಜನತೆ ನೆನೆಯುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಭಾರತದಲ್ಲಿ ಕರಾಳ ಅಧ್ಯಾಯ ಬರೆದ 26/11 2008ರಮುಂಬೈ ಭಯೋತ್ಪಾದಕ ದಾಳಿಗೆ 13 ವರ್ಷಗಳು ಕಳೆದಿದ್ದು, ಅಮಾಯಕ ಜನರು, ಹುತಾತ್ಮ ಯೋಧರನ್ನು ಕಳೆದುಕೊಂಡ ಕರಾಳ ದಿನವನ್ನು ದೇಶದ ಜನತೆ ನೆನೆಯುತ್ತಿದೆ.

ಪಾಕಿಸ್ತಾನದ ಕರಾಚಿಯಿಂದ ಸಮುದ್ರ ಮಾರ್ಗದ ಮೂಲಕ ಬಂದಿದ್ದ 10 ಮಂದಿ ಲಷ್ಕರ್-ಇ-ತೊಯ್ಬಾ ಉಗ್ರರು 2008ರ ನ.26ರಂದು ಮುಂಬೈನ ತಾಜ್ ಹೋಟೆಲ್, ಶಿವಾಜಿ ಟರ್ಮಿನಲ್ ಸೇರಿದಂತೆ 12 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ವಿದೇಶಿಗರೂ ಸೇರಿದಂತೆ 174 ಮಂದಿ ನಾಗರೀಕರು ಸಾವನ್ನಪ್ಪಿದ್ದರು.
 
ಉಗ್ರರ ದಾಳಿಯ ಕರಾಳ ದಿನಗಳು ಮತ್ತೆಂದು ಮರುಕಳಿಸದಂತೆ ಎಚ್ಚರಿಕೆ ವಹಿಸಿರುವ ಅಧಿಕಾರಿಗಳು, ಕರಾಳ ದಿನ ಹಿನ್ನಲೆಯಲ್ಲಿ ಮುಂಬೈ ನಗರದಾದ್ಯಂತ ಭಾರೀ ಕಟ್ಟೆಚ್ಚರವನ್ನು ವಹಿಸಿದ್ದಾರೆ.

ಕರಾಳ ದಿನ ಹಿನ್ನಲೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು ನಗರದ ಹಲವೆಡೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಕಗ್ಗತ್ತಲಲ್ಲಿ ಸಮುದ್ರ ಮಾರ್ಗದ ಮೂಲಕ ಮುಂಬೈ ನಗರಕ್ಕೆ ಲಗ್ಗೆಯಿಟ್ಟಿದ್ದ ಪಾಕಿಸ್ತಾನ ಮೂಲಕ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ನೆತ್ತರು ಹರಿಸಿದ್ದರು. ತಾಜ್ ಹೋಟೆಲ್ ನಲ್ಲಿದ್ದ ಜನರನ್ನು 3 ದಿನಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದ ಉಗ್ರರು ಅಟ್ಟಹಾಸ ಮೆರೆದಿದ್ದರು.

ಭಾರತದ ಇತಿಹಾಸದಲ್ಲಿಯೇ ಎಂದೂ ಕಂಡಿರದಂತಹ ರೀತಿಯಲ್ಲಿ ದಾಳಿ ನಡೆಸಿದ್ದರು. ಛತ್ರಪತಿ ಶಿವಾಜಿ ಟರ್ಮಿನಲ್, ಲಿಯೋಪೋಲ್ಡ್ ಕೆಫೆ, ಕಾಮಾ ಆಸ್ಪತ್ರೆ ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಉಗ್ರರು ದಾಳಿ ನಡೆಸಿ 174 ಅಮಾಯಕ ಜನರನ್ನು ಬಲಿಪಡೆದುಕೊಂಡಿದ್ದರು.

ಸುಮಾರು 10 ಉಗ್ರರು ಮುಂಬೈ ಮೇಲೆ ದಾಳಿ ನಡೆಸಿದ್ದರು. 68 ಗಂಟೆಗಳ ಕಾಲ ಭದ್ರತಾ ಸಿಬ್ಬಂದಿಗಳು ಉಗ್ರರೊಡನೆ ಹೋರಾಟ ನಡೆಸಿದ್ದರು. ಉಗ್ರರ ವಿರುದ್ಧ ಹೋರಾಟದಲ್ಲಿ 17 ಜನ ಭಧ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು. ಈ ಕರಾಳ ದಿನಕ್ಕೆ ಇಂದಿಗೆ 13 ವರ್ಷಗಳು ಕಳೆದಿದ್ದು, ದಾಳಿಯಲ್ಲಿ ಅಸುನೀಗಿದವರಿಗೆ ದೇಶದ ಜನತೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ, ಮುಂಬೈ 26/11 ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಹಾಗೂ ಹೇಡಿಗಳ ದಾಳಿಯಲ್ಲಿ ಭಯೋತ್ಪಾದಕರನ್ನು ಧೈರ್ಯದಿಂದ ಎದುರಿಸಿದ ಎಲ್ಲಾ ಯೋಧರಿಗೂ ಸೆಲ್ಯೂಟ್ ಹೊಡೆಯುತ್ತಿದ್ದೇನೆ. ನಿಮ್ಮ ಶೌರ್ಯಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತದೆ. ನಿಮ್ಮ ತ್ಯಾಗಕ್ಕೆ ರಾಷ್ಟ್ರ ಸದಾ ಋಣಿಯಾಗಿರಲಿದೆ ಎಂದು ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತನಾಡಿ, ನವೆಂಬರ್ 26 ರಂದು ಮುಂಬೈ ಮೇಲಿನ ಭಯೋತ್ಪಾದನಾ ದಾಳಿಗೆ 13 ವರ್ಷಗಳಾಗಿದ್ದು, ಕಳೆದುಕೊಂಡ ಅಮಾಯಕರ ಜೀವಗಳನ್ನು ಇಂದು ನೆನೆಯುತ್ತಿದ್ದೇವೆ.  ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. 26/11 ದಾಳಿಯ ಸಂದರ್ಭದಲ್ಲಿ ನಮ್ಮ ಯೋಧರು ಇತರರಿಗೆ ಮಾದರಿ ಎಂಬಂತೆ ಧೈರ್ಯವನ್ನು ಪ್ರದರ್ಶಿಸಿದರು. ಅವರ ಶೌರ್ಯ ಮತ್ತು ತ್ಯಾಗಕ್ಕೆ ನಾನು ವಂದಿಸುತ್ತೇನೆಂದು ತಿಳಿಸಿದ್ದಾರೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಟ್ವೀಟ್ ಮಾಡಿ, ದಾಳಿಯಲ್ಲಿ ಹುತಾತ್ಮರಾದ ಯೋಧರು, ಪೊಲೀಸರು ಮತ್ತು ನಾಗರೀಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

26/11 ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲಾ ಯೋಧರು, ಪೊಲೀಸರು ಮತ್ತು ನಾಗರಿಕರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ರಾಷ್ಟ್ರವನ್ನು ಸರ್ವಶ್ರೇಷ್ಠವೆಂದು ಪರಿಗಣಿಸಿ, ದೇಶಕ್ಕಾಗಿ ತ್ಯಾಗ ಮಾಡಿದ ಎಲ್ಲಾ ವೀರ ಯೋಧರಿಗೆ ದೇಶ ಸದಾ ಋಣಿಯಾಗಿರುತ್ತದೆ ಎಂದು ಹೇಳಿದ್ದಾರೆ.

26/11 ಭಯೋತ್ಪಾದಕ ದಾಳಿಯನ್ನು "ಎಂದಿಗೂ ಮರೆಯುವುದಿಲ್ಲ" ಎಂದು ವಿದೇಶಾಂಗ ವ್ಯವಹಾರಗಳಎಸ್ ಜೈಶಂಕರ್ ಅವರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ, ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಗಡಿಯಲ್ಲಿ ಸಂಕಷ್ಟದ ವಾತಾವರಣದ ನಡುವೆಯೂ ಕುಟುಂಬದಿಂದ ದೂರ ಉಳಿದಿರುವ ನಮ್ಮ ಯೋಧರು ದೇಶವನ್ನು ರಕ್ಷಿಸುತ್ತಾರೆ. ಅವರ ಜೀವವನ್ನೂ ಲೆಕ್ಕಿಸದೆ ಉಗ್ರರ ದಾಳಿಯಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಅಮಾಯಕರ ಪ್ರಾಣ ಉಳಿಸುತ್ತಾರೆ. ಇದು ಅವರ ಕುಟುಂಬ, ಗ್ರಾಮ, ದೇಶಕ್ಕೆ ಹೆಮ್ಮಯ ವಿಚಾರವಾಗಿದೆ. "26/11 ಮುಂಬೈ ಉಗ್ರರ ದಾಳಿಯ ವೀರರಿಗೆ ಸೆಲ್ಯೂಟ್. ಜೈ ಹಿಂದ್! ಎಂದು ಹೇಳಿದ್ದಾರೆ.

ಶಿರೋಮಣಿ ಅಕಾಲಿದಳ (ಎಸ್‌ಎಡಿ) ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಟ್ವೀಟ್ ಮಾಡಿ, "26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಮನಗಳ ಸಲ್ಲಿಸುತ್ತಿದ್ದೇನೆ. ತಮ್ಮ ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ನಾವು ದುಃಖಿಸುತ್ತೇವೆ. ಜನತೆಯನ್ನು ರಕ್ಷಿಸಲು ಭಯೋತ್ಪಾದಕರ ವಿರುದ್ಧ ನಿರ್ಭೀತಿಯಿಂದ ಹೋರಾಡಿದ ವೀರ ಯೋಧರಿಗೆ ದೇಶ ಸದಾಕಾಲ ಋಣಿಯಾಗಿರುತ್ತದೆ ಎಂದು ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್‌ ಮಾಡಿ, "26/11 ಮುಂಬೈ ದಾಳಿಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿ ದೇಶಕ್ಕಾಗಿ ಸೇವೆ ಸಲ್ಲಿಸಿದ ನಮ್ಮ ವೀರ ಯೋಧರ ಅಮರ ಹುತಾತ್ಮತೆಗೆ ನಾನು ಗೌರವ ಸಲ್ಲಿಸುತ್ತೇನೆ. ಈ ದೇಶವು ಹುತಾತ್ಮ ವೀರ ಯೋಧರಿಗೆ ಸದಾ ಋಣಿಯಾಗಿರಲಿದೆ ಎಂದಿದ್ದಾರೆ.

ಕೇಂದ್ರದ ಮಾಜಿ ಸಚಿವ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ನಾಯಕಿ ಹರ್‌ಸಿಮ್ರತ್ ಕೌರ್ ಬಾದಲ್ ಅವರು ಮಾತನಾಡಿ, ರಾಷ್ಟ್ರವನ್ನು ರಕ್ಷಿಸಲು ಸರ್ವೋಚ್ಚ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸುತ್ತೇನೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com