ತೆಲಂಗಾಣ: ಹೃದಯಾಘಾತವಾದ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯನಿಗೂ ಹೃದಯಾಘಾತ, ಇಬ್ಬರೂ ಸಾವು
ಕಾಮಾರೆಡ್ಡಿ: ತೆಲಂಗಾಣದ ಕಾಮಾರೆಡ್ಡಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ರೋಗಿಯ ಜೊತೆಗೆ ವೈದ್ಯರೋರ್ವರೂ ಕೂಡ ಹೃದಯಾಘಾತವಾಗಿ ಸಾವಿಗೀಡಾಗಿದ್ದಾರೆ.
ಏನಿದು ಘಟನೆ?
ತೆಲಂಗಾಣದ ಕಾಮಾರೆಡ್ಡಿಯ ಜಿಲ್ಲೆಯ ಗಾಂಧಾರಿ ಮಂಡಲದ ಗುಜ್ಜುತಾಂಡ ಎಂಬ ಪ್ರದೇಶಕ್ಕೆ ಸೇರಿದ ಸರ್ಜು ಎಂಬಾತನಿಗೆ ಹೃದಯಾಘಾತವಾಗಿತ್ತು. ಕುಟುಂಬಸ್ಥರು ತಕ್ಷಣ ಆತನನ್ನು ಗಾಂಧಾರಿ ಪ್ರದೇಶಲ್ಲಿರುವ ಖಾಸಗಿ ನರ್ಸಿಂಗ್ ಹೋಮ್ಗೆ ಕರೆ ತಂದಿದ್ದರು.
ಖಾಸಗಿ ನರ್ಸಿಂಗ್ ಹೋಮ್ ನಲ್ಲಿ ರೋಗಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ವೈದ್ಯ ಲಕ್ಷ್ಮಣ್ ಅವರಿಗೂ ಹೃದಯಾಘಾತವಾಗಿದ್ದೂ, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಮಧ್ಯೆ, ರೋಗಿಯ ಸಂಬಂಧಿಕರು ತಕ್ಷಣ ಸರ್ಜು ಅವರನ್ನು ಕಾಮರೆಡ್ಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ರೋಗಿ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ.
ಡಾ.ಲಕ್ಷ್ಮಣ್ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದ ಕಾಮರೆಡ್ಡಿ ನಿವಾಸಿಗಳು ಆಸ್ಪತ್ರೆಯ ಬಳಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಸದಾ ಆರೋಗ್ಯವಂತರಾಗಿ ಕಾಣುತ್ತಿದ್ದ ಯುವ ವೈದ್ಯನ ಸಾವಿನಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ