ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಮೊದಲು ಪ್ರಸ್ತಾಪಿಸಿದ್ದು ಸಾವರ್ಕರ್: ಛತ್ತೀಸ್ ಗಡ ಸಿಎಂ ಭೂಪೇಶ್ ಬಘೇಲ್
ರಾಯ್ಪುರ: ಮಹಾತ್ಮ ಗಾಂಧಿ ಅವರ ಸಲಹೆ ಮೇರೆಗೆ ವಿ.ಡಿ. ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರಗಳನ್ನು ಬರೆದಿದ್ದರು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿರುವ ಛತ್ತೀಸ್ ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಮೊದಲು ಪ್ರಸ್ತಾಪಿಸಿದ್ದು ಸಾವರ್ಕರ್ ಎಂದು ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ವಾರ್ಧಾ ಜೈಲಿನಲ್ಲಿದ್ದರು ಮತ್ತು ಸಾವರ್ಕರ್ ಸೆಲ್ಯುಲರ್ ಜೈಲಿನಲ್ಲಿದ್ದರು, ಹೀಗಿರುವಾಗ ಅವರು ಸಂವಹನ ನಡೆಸಲು ಹೇಗೆ ಸಾಧ್ಯ, ಜೈಲಿನಿಂದಲೇ ಹಲವು ಬಾರಿ ಕ್ಷಮಾಧಾನ ಅರ್ಜಿ ಹೇಗೆ ಸಲ್ಲಿಸಿದರು ಎಂದು ಪ್ರಶ್ನಿಸಿದ್ದಾರೆ.
ಸಾವರ್ಕರ್ ಆ ಸಮಯದಲ್ಲಿ ಬ್ರಿಟಿಷರ ಪರವಾಗಿ ಮುಂದುವರಿದರು ಮತ್ತು ವಿಭಜಿಸಿ ಆಳುವ ನೀತಿಗೆ ಸಹಾಯ ಮಾಡಿದರು. 1925 ರಲ್ಲಿ ಜೈಲಿನಿಂದ ಹೊರಬಂದ ನಂತರ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಅವರು ಮೊದಲು ಪ್ರಸ್ತಾಪಿಸಿದರು ಎಂದು ತಿಳಿಸಿದ್ದಾರೆ.
ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ಕ್ಷಮಾಪಣೆ ಪತ್ರಗಳನ್ನು ಬರೆದ ಬಗ್ಗೆ ಸುಳ್ಳುಗಳನ್ನು ಪ್ರಚಾರ ಮಾಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಹೀಗೆ ದಾರಿ ತಪ್ಪಿಸುತ್ತಿರುವವರಿಗೆ ಕ್ಷಮಾಪಣೆ ಪತ್ರಗಳನ್ನು ಬರೆಯಲು ಸಲಹೆ ನೀಡಿದ್ದು ಮಹಾತ್ಮ ಗಾಂಧಿ ಎಂಬುದು ಗೊತ್ತಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.
ಸಾವರ್ಕರ್ ವಿರುದ್ಧ ಸಾಕಷ್ಟು ಅಪಪ್ರಚಾರ ನಡೆದಿದೆ. ಬ್ರಿಟಿಷ್ ಸರ್ಕಾರಕ್ಕೆ ಕ್ಷಮಾಪಣೆ ಪತ್ರವನ್ನು ಬರೆದರು ಎಂಬುದನ್ನು ಸಾಕಷ್ಟು ಸಲ ಹೇಳಲಾಗಿದೆ. ಸತ್ಯ ಏನೆಂದರೆ ಸಾವರ್ಕರ್ ಬಿಡುಗಡೆ ಬಯಸಿ ಕ್ಷಮಾಪಣೆ ಪತ್ರಗಳನ್ನು ಬರೆಯಲಿಲ್ಲ. ಸಾಮಾನ್ಯವಾಗಿ ಒಬ್ಬ ಕೈದಿಗೆ ಕ್ಷಮಾಪಣೆ ಪತ್ರ ಬರೆಯುವ ಹಕ್ಕು ಇದೆ. ಮಹಾತ್ಮ ಗಾಂಧಿ ಅವರು ಕ್ಷಮಾಪಣೆ ಪತ್ರ ಬರೆಯುವಂತೆ ಸಾವರ್ಕರ್ ಅವರಿಗೆ ಸೂಚಿಸಿದರು ಎಂದು ರಾಜನಾಥ್ ಸಿಂಗ್ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ