ಬೆಳಗಾವಿಯಲ್ಲಿ ಎಂಇಎಸ್ ಸೋತಿರುವುದು ದುರದೃಷ್ಟಕರ, ಮರಾಠಿಗರಿಗೆ ಮಾಡಿರುವ ದ್ರೋಹ: ಶಿವಸೇನೆ ಮುಖಂಡ ಸಂಜಯ್ ರಾವತ್
ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಾಗರ ಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಸೋತಿರುವುದು ದುರದೃಷ್ಟಕರ ಎಂದು ಶಿವಸೇನೆ ಮುಖಂಡ ಹಾಗೂ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ನಿನ್ನೆ ಪ್ರಕಟಗೊಂಡ ಮೂರು ಜಿಲ್ಲೆಗಳ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಈ ಚುನಾವಣೆಯ ಸೋಲಿನ ಮೂಲಕ ಎಂಇಎಸ್ ತೀವ್ರ ಮುಜುಗರಕ್ಕೀಡಾಗಿದೆ. ಇದರ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್, 'ನೆರೆಯ ಕರ್ನಾಟಕದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಪರಾಭವಗೊಂಡಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಮರಾಠಿಗರಿಗೆ ಮಾಡಿರುವ ದ್ರೋಹ
ಇದೇ ವೇಳೆ ಬೆಳಗಾವಿಯಲ್ಲಿ ಮರಾಠಿ ಅಭ್ಯರ್ಥಿಗಳನ್ನು ಸೋಲಿಸಿ, ಮಹಾರಾಷ್ಟ್ರದಲ್ಲಿ ಬಿಜೆಪಿ ಚುನಾವಣೆ ಫಲಿತಾಂಶದಿಂದ ಸಂಭ್ರಮಿಸುತ್ತಿರುವುದನ್ನು ಟೀಕಿಸಿರುವ ಸಂಜಯ್, ‘ಇದು ಮರಾಠಿಗರಿಗೆ ಮಾಡಿರುವ ದ್ರೋಹ‘.. ಬೆಳಗಾವಿಯಲ್ಲಿ ಮರಾಠಿ ಅಭ್ಯರ್ಥಿಗಳನ್ನು ಸೋಲಿಸಲು ಕರ್ನಾಟಕ ಸರ್ಕಾರ ಸಂಚು ರೂಪಿಸಿತು. ಇದರಿಂದಾಗಿ ಅಭ್ಯರ್ಥಿಗಳು ನಗರದ ಮೇಲಿನ ಹಿಡಿತವನ್ನು ಕಳೆದುಕೊಂಡಂತಾಗಿದೆ‘ ಎಂದು ಹೇಳಿದರು.
‘ಪಾಲಿಕೆ ಚುನಾವಣೆಯಲ್ಲಿ ನಿಮ್ಮ ಪಕ್ಷ ಗೆದ್ದರೂ ಪರವಾಗಿಲ್ಲ, ಆದರೆ, ನೀವು ಮರಾಠಿ ಅಭ್ಯರ್ಥಿಗಳ ಸೋಲಿಗೆ ಖುಷಿಪಡುತ್ತಿದ್ದೀರಿ. ನಿಮಗೆ ನಾಚಿಕೆಯಾಗುತ್ತಿಲ್ಲವೇ?. ಇಂಥ ದ್ರೋಹವನ್ನು ನಾನು ಹಿಂದೆಂದೂ ನೋಡಿಲ್ಲ. ಬೆಳಗಾವಿಯಲ್ಲಿ ಮರಾಠಿಯ ಆತ್ಮಾಭಿಮಾನ ಮತ್ತು ಸ್ವಾಭಿಮಾನಕ್ಕಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂಬುದನ್ನು ಮರೆಯಬಾರದು ಎಂದು ರಾವತ್ ಹೇಳಿದರು.
ಇತಿಹಾಸ ಬರೆದ ಬಿಜೆಪಿ
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 25 ವರ್ಷಗಳ ಬಳಿಕ ಚಿಹ್ನೆ ಮುಂದಿಟ್ಟುಕೊಂಡು ಸ್ಪರ್ಧಿಸಿದ್ದ ಬಿಜೆಪಿಗೆ, ಹಾಲಿ ಚುನಾವಣೆ ಫಲ ನೀಡಿದೆ. ಬೆಳಗಾವಿ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರುತ್ತಿದೆ. ಬೆಳಗಾವಿಯ ಮಹಾನಗರ ಪಾಲಿಕೆಯ 58 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಗುದ್ದುಗೆ ಏರಿದೆ. ಉಳಿದಂತೆ ಕಾಂಗ್ರೆಸ್-10 ಅಸಾದುದ್ದೀನ್ ಒವೈಸಿಯವರ ಎಐಎಂಐಎಂ ಪಕ್ಷ ಒಂದು ಸ್ಥಾನ ಹಾಗೂ ಪಕ್ಷೇತರರು 12 ಸ್ಥಾನ ಪಡೆದಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಶೂನ್ಯ ಸಂಪಾದನೆ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ