
ನವದೆಹಲಿ: ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಅತ್ಯುತ್ತಮ ಸಂಶೋಧನಾ ಸಂಸ್ಥೆ ಎಂಬ ಹಿರಿಮೆಗೆ ಬೆಂಗಳೂರು ಐಐಎಸ್ಸಿ ಪಾತ್ರವಾಗಿದೆ.
ಕೇಂದ್ರ ಶಿಕ್ಷಣ ಸಚಿವಾಲಯ ಗುರುವಾರ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ ಅನ್ನು (ಎನ್‌ಐಆರ್‌ಎಫ್) ಪ್ರಕಟಿಸಿದ್ದು, ದೇಶದ ಸಂಶೋಧನಾ ಸಂಸ್ಥೆಗಳಲ್ಲಿಯೇ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಅತ್ಯುತ್ತಮ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಅಲ್ಲದೆ ಬೆಂಗಳೂರು ಐಐಎಸ್ಸಿ ದೇಶದ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಮೊದಲ ಸ್ಥಾನ ಹಾಗೂ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ವೈದ್ಯಕೀಯ ವಿಭಾಗದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ಗೆ 4ನೇ ಸ್ಥಾನ, ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜಿಗೆ 10ನೇ ಸ್ಥಾನ ದೊರೆತಿದೆ.
ಉಡುಪಿಯ ಮಣಿಪಾಲ ದಂತ ವೈದ್ಯಕೀಯ ಕಾಲೇಜು ಮೊದಲ ಸ್ಥಾನ
ದಂತ ವೈದ್ಯಕೀಯ ಕಾಲೇಜು ರ್‍ಯಾಂಕಿಂಗ್ ಪಟ್ಟಿಯಲ್ಲಿ ಉಡುಪಿಯ ಮಣಿಪಾಲ ದಂತ ವೈದ್ಯಕೀಯ ಕಾಲೇಜು ಮೊದಲ ಸ್ಥಾನದಲ್ಲಿದ್ದರೆ, ಮಂಗಳೂರಿನ ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜು 6ನೇ ಸ್ಥಾನ, ಮಂಗಳೂರಿನ ಮಣಿಪಾಲ ದಂತ ವೈದ್ಯಕೀಯ ಕಾಲೇಜು 7ನೇ ಸ್ಥಾನವನ್ನು ಪಡೆದುಕೊಂಡಿವೆ.
ಇನ್ನು ಕಾನೂನು ಶಿಕ್ಷಣ ವಿಭಾಗದಲ್ಲಿ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ ಮೊದಲ ಸ್ಥಾನದಲ್ಲಿದ್ದು, ‘ಬಿ-ಸ್ಕೂಲ್’ ವಿಭಾಗದಲ್ಲಿ ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯು (ಐಐಎಂ) ಎರಡನೇ ಸ್ಥಾನದಲ್ಲಿದೆ. ಫಾರ್ಮಸಿ ಕಾಲೇಜು ವಿಭಾಗದಲ್ಲಿ ಉಡುಪಿಯ ಮಣಿಪಾಲ ಕಾಲೇಜ್ ಆಫ್ ಫಾರ್ಮಾಸಿಟಿಕಲ್ ಸೈನ್ಸ್ ಮತ್ತು ಮೈಸೂರಿನ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿ ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿವೆ.
ಅತ್ಯುತ್ತಮ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಬೆಂಗಳೂರಿನ ಐಐಎಸ್ಸಿ ಮೊದಲ ಸ್ಥಾನದಲ್ಲಿದ್ದು, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಏಳನೇ ಸ್ಥಾನದಲ್ಲಿದೆ. ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) 10ನೇ ಸ್ಥಾನ ಪಡೆದಿದೆ.
ಮದ್ರಾಸ್ ಐಐಟಿಗೆ ಅಗ್ರಸ್ಥಾನ
ಇನ್ನು ದೇಶದಲ್ಲಿನ ಅತ್ಯುತ್ತಮ ಸಂಸ್ಥೆಗಳಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್ ಈ ವರ್ಷವೂ ಅಗ್ರಸ್ಥಾನ ಪಡೆದಿದೆ. ಅದು ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲೂ ಮೊದಲ ಸ್ಥಾನ ಪಡೆದುಕೊಂಡಿದ್ದು, ಅಹಮದಾಬಾದ್‌ನ ಭಾರತೀಯ ನಿರ್ವಹಣಾ ಸಂಸ್ಥೆಯು (ಐಐಎಂ) ‘ಬಿ-ಸ್ಕೂಲ್’ಗಳಲ್ಲೇ ಅತ್ಯುತ್ತಮ ಸ್ಥಾನ ಪಡೆದಿದೆ. ಕೋಲ್ಕತ್ತಾದ ಐಐಎಂ ಮೂರನೇ ಸ್ಥಾನದಲ್ಲಿದೆ. ಉಳಿದಂತೆ ವೈದ್ಯಕೀಯ ಕಾಲೇಜುಗಳ ವಿಭಾಗದಲ್ಲಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮೊದಲ ಸ್ಥಾನ ಪಡೆದುಕೊಂಡಿದೆ.
Advertisement