ವಾಯುಸೇನೆ ಬತ್ತಳಿಕೆಗೆ ಶೀಘ್ರ 56 C-295 ಸರಕು ಸಾಗಣೆ ವಿಮಾನ; ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಯಿಂದ ವಿಮಾನ ನಿರ್ಮಾಣ

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ 56 C-295 ಸರಕು ಸಾಗಣೆ ವಿಮಾನ ಸ್ವಾಧೀನ ಒಪ್ಪಂದವನ್ನು ಅಧಿಕೃತಗೊಳಿಸಿದೆ.
ಸಿ-295 ವಿಮಾನ
ಸಿ-295 ವಿಮಾನ
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ 56 C-295 ಸರಕು ಸಾಗಣೆ ವಿಮಾನ ಸ್ವಾಧೀನ ಒಪ್ಪಂದವನ್ನು ಅಧಿಕೃತಗೊಳಿಸಿದೆ.

ಭಾರತೀಯ ಭೂಸೇನೆಗೆ 118 ಅರ್ಜುನ ಎಂಕೆ-1 ಯುದ್ಧ ಟ್ಯಾಂಕರ್‌ ನಿರ್ಮಿಸಲು ಆದೇಶ ನೀಡಿದ್ದ ಕೇಂದ್ರ ಸರ್ಕಾರ, ಈಗ ವಾಯುಪಡೆಗಾಗಿ 20 ಸಾವಿರ ಕೋಟಿ ರೂ. ಮೌಲ್ಯದ 56 ಮಧ್ಯಮ ಪ್ರಮಾಣದ ಸರಕು ಸಾಗಣೆ ವಿಮಾನ, “ಸಿ-295′ ಖರೀದಿಗೆ ಅನುಮತಿ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸದ್ಯ ಇರುವ ಆ್ಯವ್ರೋ-748 ವಿಮಾನಗಳ ಸ್ಥಾನವನ್ನು ಹೊಸ ವಿಮಾನಗಳು ತುಂಬಲಿದ್ದು, ಸ್ಪೇನ್‌ನ ಏರ್‌ಬಸ್‌ ಡಿಫೆನ್ಸ್‌ ಆ್ಯಂಡ್‌ ಸ್ಪೇಸ್‌ ಜತೆಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಒಪ್ಪಂದದ ಅನ್ವಯ ಮೊದಲ ಹಂತದಲ್ಲಿ 16 ವಿಮಾನಗಳನ್ನು ಸ್ಪೇನ್‌ನಿಂದ ದೇಶಕ್ಕೆ ತರಲಾಗುತ್ತದೆ. ಉಳಿದ 40 ವಿಮಾನಗಳನ್ನು ಏರ್‌ಬಸ್‌ ಡಿಫೆನ್ಸ್‌ ಆ್ಯಂಡ್‌ ಸ್ಪೇಸ್‌ ಹಾಗೂ ಟಾಟಾ ಅಡ್ವಾನ್ಸ್‌ ಸಿಸ್ಟಮ್ಸ್‌ ಲಿ.(ಟಿಎಎಸ್‌ಎಲ್‌) ಜಂಟಿಯಾಗಿ ದೇಶದಲ್ಲಿಯೇ 10 ವರ್ಷಗಳ ಅವಧಿಯಲ್ಲಿ ಸಿದ್ಧಪಡಿಸಲಿವೆ. 

ದೇಶದ ಇತಿಹಾಸದಲ್ಲಿ ಇದೇ ಮೊದಲು
ಇನ್ನು ಖಾಸಗಿ ಕಂಪನಿಯೊಂದು ದೇಶದಲ್ಲಿಯೇ ಸೇನಾ ವಿಮಾನ ಅಭಿವೃದ್ಧಿಪಡಿಸುತ್ತಿರುವುದು ಇದೇ ಮೊದಲು ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎ.ಭರತ್‌ ಭೂಷಣ್‌ ಬಾಬು ಟ್ವೀಟ್‌ ಮಾಡಿದ್ದಾರೆ.

ಖಾಸಗಿ ಕ್ಷೇತ್ರದಲ್ಲಿ ಇದು ಮೊದಲ `ಮೇಕ್ ಇನ್ ಇಂಡಿಯಾ’ ಏರೋಸ್ಪೇಸ್ ಕಾರ್ಯಕ್ರಮವಾಗಿದ್ದು, ಇದು ಸಂಪೂರ್ಣವಾಗಿ `ಕೈಗಾರಿಕಾ ಪರಿಸರ ವ್ಯವಸ್ಥೆಯ ಪರಿಪೂರ್ಣವಾದ ಅಭಿವೃದ್ಧಿ’ಯನ್ನು ಒಳಗೊಂಡಿದೆ. ಉತ್ಪಾದನೆಯಿಂದ ಜೋಡಣೆ, ಪರೀಕ್ಷೆ ಮತ್ತು ಅರ್ಹತೆ, ವಿಮಾನದ ಸಂಪೂರ್ಣ ಜೀವನಚಕ್ರದ ವಿತರಣೆ ಮತ್ತು ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಎರಡೂ ಕಂಪನಿಗಳ ನಡುವೆ ಮಾಡಿಕೊಂಡಿರುವ ಕೈಗಾರಿಕಾ ಪಾಲುದಾರಿಕೆ ಪ್ರಕಾರ ಈ ಪ್ರಕ್ರಿಯೆ ನಡೆಯಲಿದೆ. ಒಪ್ಪಂದ ಜಾರಿಗೆ ಬಂದ ದಿನದಿಂದ 4 ವರ್ಷಗಳ ಅವಧಿಯಲ್ಲಿ ಮೊದಲ 16 ವಿಮಾನಗಳು ವಿತರಣೆ ಮಾಡಲಾಗುತ್ತದೆ. ಎಲ್ಲಾ ಐಎಎಫ್ C295MW ವಿಮಾನಗಳನ್ನು ದೇಶೀಯವಾಗಿ ತಯಾರಿಸುವ ಎಲೆಕ್ಟ್ರಾನಿಕ್ ವಾರ್ ಫೇರ್ ಸೂಟ್ ನೊಂದಿಗೆ ಸುಸಜ್ಜಿತಗೊಳಿಸಿ ಹಸ್ತಾಂತರ ಮಾಡಲಾಗುತ್ತದೆ.

ಈ ಬಗ್ಗೆ ಮಾತನಾಡಿದ ಏರ್ ಬಸ್ ಡಿಫೆನ್ಸ್ ಅಂಡ್ ಸ್ಪೇಸ್ ನ ಸಿಇಒ ಮೈಕೆಲ್ ಶೋಲ್ಹಾರ್ನ್ ಅವರು, 'ಮುಂದಿನ 10 ವರ್ಷಗಳಲ್ಲಿ ಭಾರತದ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಈ ಒಪ್ಪಂದವು ಬೆಂಬಲ ನೀಡುತ್ತದೆ. ಇದರ ಜೊತೆಗೆ ಈ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಬರುವಂತೆ ಮಾಡುತ್ತದೆ ಮತ್ತು 15,000 ಅತ್ಯುತ್ತಮ ಕೌಶಲ್ಯಭರಿತ ನೇರ ಉದ್ಯೋಗಗಳು ಹಾಗೂ 10,000 ದಷ್ಟು ಪರೋಕ್ಷ ಉದ್ಯೋಗಗಳನ್ನು ಸೃಜಿಸುತ್ತದೆ. C295MW ಈ ವಿಭಾಗದ ಮುಂಚೂಣಿಯಲ್ಲಿರುವುದು ಮತ್ತೊಮ್ಮೆ ಸಾಬೀತಾಗಿದೆ ಮತ್ತು ಭಾರತವನ್ನು ಹೊಸ ಆಪರೇಟರ್ ಆಗಿ ಸೇರಿದ ನಂತರ, ಈ ಪ್ರಕಾರವು ತನ್ನ ಹೆಜ್ಜೆ ಗುರುತುಗಳನ್ನು ಮತ್ತಷ್ಟು ವಿಸ್ತರಣೆ ಮಾಡುತ್ತದೆ. ಇದು ಕೇವಲ ಕಾರ್ಯಾಚರಣೆಯ ಅಂಶಗಳ ಮೇಲೆ ಮಾತ್ರವಲ್ಲದೇ ತನ್ನದೇ ಕೈಗಾರಿಕಾ ಮತ್ತು ತಾಂತ್ರಿಕ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು.

ರತನ್‌ ಟಾಟಾ ಶ್ಲಾಘನೆ:
ಒಪ್ಪಂದದ ಬಗ್ಗೆ ಟಾಟಾ ಟ್ರಸ್ಟ್‌ನ ಅಧ್ಯಕ್ಷ ರತನ್‌ ಟಾಟಾ ಸಂತಸ ವ್ಯಕ್ತಪಡಿಸಿದ್ದಾರೆ. ದೇಶೀಯವಾಗಿಯೇ ಅಂತಾರಾಷ್ಟ್ರೀಯ ಗುಣಮಟ್ಟದ ಪೂರೈಕೆ ವ್ಯವಸ್ಥೆಯನ್ನು ನೀಡಲು ಈ ಒಪ್ಪಂದ ಸಹಕಾರಿಯಾಗಲಿದೆ. ಈ ಐತಿಹಾಸಿಕ ನಿರ್ಧಾರಕ್ಕೆ ರಕ್ಷಣಾ ಸಚಿವಾಲಯ ಮತ್ತು ಏರ್‌ಬಸ್‌ ಅನ್ನು ಟಾಟಾ ಟ್ರಸ್ಟ್‌ ಅಭಿನಂದಿಸುತ್ತದೆ ಎಂದು ಟ್ವೀಟ್‌ ಮಾಡಿದ್ದಾರೆ.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್)ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕರನ್ ಸಿಂಗ್ ಅವರು ಮಾತನಾಡಿ, ಇದು ಟಾಟಾಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಭಾರತೀಯ ಸೇನಾ ಉತ್ಪಾದನಾ ಕ್ಷೇತ್ರದಲ್ಲಿ ಒಂದು ಹೊಸ ಮೈಲಿಗಲ್ಲಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಖಾಸಗಿ ಕಂಪನಿಯೊಂದು ಸ್ವದೇಶದಲ್ಲಿಯೇ ಸಂಪೂರ್ಣವಾಗಿ ವಿಮಾನವನ್ನು ತಯಾರಿಸುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಈ ಪ್ರಯತ್ನವು ಭಾರತದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಸಂಕೀರ್ಣವಾದ ಪ್ಲಾಟ್ ಫಾರ್ಮ್ ಗಳನ್ನು ಸೃಷ್ಟಿಸಲು ರಕ್ಷಣಾ ಉತ್ಪಾದಕ ಸಂಸ್ಥೆಯಾಗಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಗೆ ಹೆಮ್ಮೆ ಎನಿಸುತ್ತಿದೆ ಎಂದು ತಿಳಿಸಿದರು. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com