ಆಮ್ಲಜನಕ ಪೂರೈಕೆಯಲ್ಲಿ ಕೊರತೆ: ಮಧ್ಯ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ 6 ಕೋವಿಡ್-19 ರೋಗಿಗಳ ಸಾವು!

ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯಿಂದ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ಮಂದಿ ಕೋವಿಡ್-19 ರೋಗಿಗಳು ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಶಹ್ದೋಲ್ ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಹ್ಡೊಲ್: ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯಿಂದ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ಮಂದಿ ಕೋವಿಡ್-19 ರೋಗಿಗಳು ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಶಹ್ದೋಲ್ ನಲ್ಲಿ ನಡೆದಿದೆ.

ಶಹ್ದೋಲ್ ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ಭಾನುವಾರ ನಸುಕಿನ ಜಾವ ಸಂಭವಿಸಿದೆ. ಈ ವೈದ್ಯಕೀಯ ಕಾಲೇಜಿನ ಕೋವಿಡ್-19 ಕೇಂದ್ರದ ತೀವ್ರ ನಿಗಾ ಘಟಕದಲ್ಲಿ 62 ಮಂದಿ ರೋಗಿಗಳು ದಾಖಲಾಗಿದ್ದರು. ಅವರಲ್ಲಿ 6 ಮಂದಿ ರೋಗಿಗಳು ಕಡಿಮೆ ಆಕ್ಸಿಜನ್ ಪೂರೈಕೆಯಿಂದ ಮೃತಪಟ್ಟಿದ್ದಾರೆ ಎಂದು ಕಾಲೇಜಿನ ಡೀನ್ ಡಾ ಮಿಲಿಂದ್ ಶಿರಲ್ಕರ್ ತಿಳಿಸಿದ್ದಾರೆ.

ಇತರ ರೋಗಿಗಳು ಸದ್ಯ ಸುರಕ್ಷಿತವಾಗಿದ್ದಾರೆ, ತಜ್ಞರನ್ನು ಆಸ್ಪತ್ರೆಗೆ ಕರೆಯಲಾಗಿದ್ದು ನಿಖರ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಹೇಳಿದರು.

ನಿನ್ನೆ ಸಾಯಂಕಾಲ ಹೊತ್ತಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆಯ ಕೊರತೆಯುಂಟಾಗಿತ್ತು. ನಂತರ ನಿರಂತರವಾಗಿ ಪೂರೈಕೆದಾರರನ್ನು ಸಂಪರ್ಕಿಸಲಾಗುತ್ತಿದ್ದರಾದರೂ ನಿನ್ನೆ ತಡರಾತ್ರಿಯಾದರೂ ಆಕ್ಸಿಜನ್ ಹೊತ್ತ ವಾಹನ ಬಂದಿರಲಿಲ್ಲ. ಹೀಗಾಗಿ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿ ರೋಗಿಗಳು ಮೃತಪಟ್ಟಿದ್ದಾರೆ.

ಕಳೆದ ಕೆಲ ದಿನಗಳಿಂದ ಇಲ್ಲಿಗೆ ಆಕ್ಸಿಜನ್ ಪೂರೈಕೆಯಲ್ಲಿ ಕೊರತೆಯುಂಟಾಗಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ. ರೋಗಿಗಳ ಸಾವಿನ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇನ್ನು ಎಷ್ಟು ದಿನ ಈ ರೀತಿ ಆಕ್ಸಿಜನ್ ಪೂರೈಕೆ ಕೊರತೆಯಿಂದ ಎಷ್ಟು ರೋಗಿಗಳು ಸಾಯುತ್ತಾರೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ಇನ್ನೂ ಘಟನೆ ಬಗ್ಗೆ ಪ್ರತಿಕ್ರಿಯಿಸಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com