ಕೋವಿಡ್ ಸೋಂಕು ಹೆಚ್ಚಳ ಹಿನ್ನಲೆ: ವಿದೇಶಿ ಕೋವಿಡ್ ಲಸಿಕೆಗಳ ಮೇಲಿನ ಆಮದು ಶುಲ್ಕ ರದ್ದುಪಡಿಸಲು ಭಾರತ ಸರ್ಕಾರ ನಿರ್ಧಾರ?

ಪ್ರಮುಖ ಬೆಳವಣಿಗೆಯಲ್ಲಿ ವಿದೇಶಿ ಕೋವಿಡ್ ಲಸಿಕೆಗಳ ಮೇಲಿನ ಆಮದು ಶುಲ್ಕ ರದ್ದುಪಡಿಸಲು ಭಾರತ ಸರ್ಕಾರ ಚಿಂತನೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.
ಸ್ಪುಟ್ನಿಕ್ ವಿ ಲಸಿಕೆ (ಸಂಗ್ರಹ ಚಿತ್ರ)
ಸ್ಪುಟ್ನಿಕ್ ವಿ ಲಸಿಕೆ (ಸಂಗ್ರಹ ಚಿತ್ರ)

ನವದೆಹಲಿ: ಪ್ರಮುಖ ಬೆಳವಣಿಗೆಯಲ್ಲಿ ವಿದೇಶಿ ಕೋವಿಡ್ ಲಸಿಕೆಗಳ ಮೇಲಿನ ಆಮದು ಶುಲ್ಕ ರದ್ದುಪಡಿಸಲು ಭಾರತ ಸರ್ಕಾರ ಚಿಂತನೆಯಲ್ಲಿ ತೊಡಗಿದೆ ಎಂದು ತಿಳಿದುಬಂದಿದೆ.

ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ದೇಶದ ಪ್ರತೀಯೊಬ್ಬ ನಾಗರೀಕನಿಗೂ ಲಸಿಕೆ ಕೊಡಿಸುವ ಉದ್ದೇಶದಿಂದ ಭಾರತ ಸರ್ಕಾರ ವಿದೇಶಿ ಕೋವಿಡ್ ಲಸಿಕೆಗಳಿಗೂ ಬಳಕೆಯ ಅನುಮತಿ ನೀಡಿದೆ. ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಬಳಕೆಗೆ  ಭಾರತದಲ್ಲಿ ಅನುಮತಿ ದೊರೆತ ಬೆನ್ನಲ್ಲಿಯೇ ವಿದೇಶದ ಮತ್ತಷ್ಟು ಲಸಿಕಾ ತಯಾರಿಕಾ ಸಂಸ್ಥೆಗಳು ಭಾರತೀಯ ಮಾರುಕಟ್ಟೆಯತ್ತ ಸಕಾರಾತ್ಮಕವಾಗಿ ನೋಡುತ್ತಿರುವ ಹೊತ್ತಿನಲ್ಲೇ ಭಾರತ ಸರ್ಕಾರ ವಿದೇಶಿ ಕೋವಿಡ್ ಲಸಿಕೆಗಳ ಮೇಲಿನ ಆಮದು ಶುಲ್ಕ ರದ್ದುಪಡಿಸಲು ಭಾರತ ಸರ್ಕಾರ ಚಿಂತನೆಯಲ್ಲಿ ತೊಡಗಿದೆ.

ಈ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದ್ದು, 'ಮಾರಕ ಕೋವಿಡ್ ಸಾಂಕ್ರಾಮಿಕವನ್ನು ಹತ್ತಿಕ್ಕಲು ಕೈಗೊಂಡಿರುವ ವಿವಿಧ ಕ್ರಮಗಳಿಗೆ ಅನುಗುಣವಾಗಿ, ಭಾರತ ಸರ್ಕಾರವು ವಿದೇಶದಿಂದ ಆಮದು ಮಾಡಿಕೊಳ್ಳುವ ಕೋವಿಡ್-19 ಲಸಿಕೆಗಳ ಮೇಲಿನ ಶೇ.10ರಷ್ಟು ಆಮದು ಶುಲ್ಕವನ್ನು  ರದ್ದುಪಡಿಸಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು, ಸರ್ಕಾರದ ಮಧ್ಯಪ್ರವೇಶವಿಲ್ಲದೆಯೇ, ಈಗಾಗಲೇ ಅನುಮತಿ ಪಡೆದುಕೊಂಡಿರುವ ಲಸಿಕೆಯನ್ನು ದೇಶದಲ್ಲಿ ತೆರೆದ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಿದೆ. ಅಲ್ಲದೆ, ಬೆಲೆ ನಿಗದಿಪಡಿಸುವ ಸ್ವಾತಂತ್ರ್ಯವನ್ನು ಕೂಡ  ಸರ್ಕಾರ ನೀಡಲಿದೆ ಎಂದು ತಿಳಿಸಿದ್ದಾರೆ. ಆದರೆ ಈ ಕುರಿತಂತೆ ಹಣಕಾಸು ಸಚಿವಾಲಯದ ವಕ್ತಾರರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.

ಪ್ರಸ್ತುತ ದೇಶದಲ್ಲಿ ಕೋವಿಡ್ 19 ಲಸಿಕೆ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ನಿಯಂತ್ರಿಸುತ್ತಿದ್ದು, ಈ ಹಿಂದೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವ ಅನುಮತಿ ನೀಡಿತ್ತು. ಆದರೆ ಇದೀಗ ದೇಶದಲ್ಲಿ ಮತ್ತೆ ಕೊರೋನಾ ವೈರಸ್ ಸಾಂಕ್ರಾಮಿಕ ಆರ್ಭಟಿಸುತ್ತಿರುವ ಹಿನ್ನಲೆಯಲ್ಲಿ ಇದೇ ಮೇ 1ರಿಂದಲೇ 18  ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಅನುಮತಿ ನೀಡಿದೆ. ಆ ಮೂಲಕ ದೇಶದ ಪ್ರತೀಯೊಬ್ಬ ನಾಗರಿಕನಿಗೂ ಲಸಿಕೆ ಹಾಕುವ ಜಗತ್ತಿನ ಅತೀ ದೊಡ್ಡ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ಕೇಂದ್ರ ಸರ್ಕಾರ ಮುನ್ಸೂಚನೆ ನೀಡಿದೆ.

ರಷ್ಯಾದಿಂದ ಶೀಘ್ರದಲ್ಲೇ ಸ್ಪುಟ್ನಿಕ್-ವಿ ಲಸಿಕೆ ದೇಶಕ್ಕೆ ಬರಲಿದೆ. ಇದಲ್ಲದೆ ಫೈಜರ್, ಮಾಡರ್ನಾ ಮತ್ತು ಜಾನ್ಸನ್ ಆಂಡ್ ಜಾನ್ಸನ್ ಲಸಿಕೆಗಳನ್ನು ಕೂಡಾ ಆಮದು ಮಾಡಿಕೊಂಡು ಬಳಸಿಕೊಳ್ಳುವಂತೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ ಎನ್ನಲಾಗಿದೆ. ಪ್ರಸ್ತುತ ನೇಪಾಳ, ಪಾಕಿಸ್ತಾನ, ಅರ್ಜೆಂಟಿನಾ ಮತ್ತು  ಬ್ರೆಜಿಲ್ ದೇಶಗಳು ಲಸಿಕೆ ಆಮದಿಗೆ ಶೇ 10ರಿಂದ 20 ಶುಲ್ಕ ವಿಧಿಸುತ್ತಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com