'ಇದು ಕೊರೋನಾ ಅಲೆ ಅಲ್ಲ, ಸುನಾಮಿ, ಆಕ್ಸಿಜನ್ ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಿ': ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶ 

ಕೊರೋನಾ ಸಾಂಕ್ರಾಮಿಕ ಅಲೆಯ ಮಧ್ಯೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ ಬಗ್ಗೆ ಕೇಂದ್ರ ಹಾಗೂ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ದೆಹಲಿ ಹೈಕೋರ್ಟ್ ರಾಜಧಾನಿ ದೆಹಲಿಯಲ್ಲಿ ಆಕ್ಸಿಜನ್ ಸರಾಗವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಿ ಎಂದು ಆದೇಶ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೋನಾ ಸಾಂಕ್ರಾಮಿಕ ಅಲೆಯ ಮಧ್ಯೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ ಬಗ್ಗೆ ಕೇಂದ್ರ ಹಾಗೂ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ದೆಹಲಿ ಹೈಕೋರ್ಟ್ ರಾಜಧಾನಿ ದೆಹಲಿಯಲ್ಲಿ ಆಕ್ಸಿಜನ್ ಸರಾಗವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಿ ಎಂದು ಆದೇಶ ನೀಡಿದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವವರು ಕೊರೋನಾ ಸೋಂಕಿಗೆ ತುತ್ತಾಗಿ ತೀವ್ರ ಅನಾರೋಗ್ಯಕ್ಕೀಡಾದರೆ ಮೃತಪಡಬಹುದು,ಆದರೆ ಈಗಿನ ಪರಿಸ್ಥಿತಿಯಲ್ಲಿ ಬದುಕುಳಿದವರು ಕೂಡ ಆಕ್ಸಿಜನ್ ಇಲ್ಲದೆ ಸಾಯುತ್ತಿದ್ದಾರೆ ಎಂದು ದೆಹಲಿ ಆಸ್ಪತ್ರೆಗಳಲ್ಲಿನ ಸಮಸ್ಯೆಯನ್ನು ದೆಹಲಿ ಹೈಕೋರ್ಟ್ ತೆರೆದಿಟ್ಟಿದೆ.

ಕೊರೋನಾದಿಂದ ಸಾಯುವವರ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಐಐಟಿ ವಿಜ್ಞಾನಿಗಳು ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿ ಹೇಳಿದ ನ್ಯಾಯಪೀಠ, ಭಾರತದಲ್ಲಿ ಕೊರೋನಾ ಸೋಂಕು ಮೇ 11ರಿಂದ 15ರವರೆಗೆ ಗರಿಷ್ಠ ಮಟ್ಟದವರೆಗೆ ಹೋಗಬಹುದು, ದೇಶದಲ್ಲಿ 33ರಿಂದ 35 ಲಕ್ಷ ಸಕ್ರಿಯ ಕೇಸುಗಳು ಆಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ ಎಂದು ಎಚ್ಚರಿಕೆ ನೀಡಿದೆ.

ನಾವು ಇದನ್ನು ಕೊರೋನಾ ಅಲೆ ಎಂದು ಕರೆಯುತ್ತೇವೆ, ವಾಸ್ತವವಾಗಿ ಇದು ಸುನಾಮಿ, ಈ ಸಂದರ್ಭದಲ್ಲಿ ಕೇಂದ್ರ ಹಾಗೂ ದೆಹಲಿ ಸರ್ಕಾರ ಮೂಲಭೂತ ಸೌಕರ್ಯ, ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆ, ವೈದ್ಯಕೀಯ ಸಿಬ್ಬಂದಿ, ಔಷಧಗಳು, ಲಸಿಕೆಗಳು ಮತ್ತು ಆಕ್ಸಿಜನ್ ಗಳ ಪೂರೈಕೆಯನ್ನು ಹೆಚ್ಚಿಸಬೇಕು. ದೆಹಲಿಗೆ ಪ್ರತಿದಿನ ಪೂರೈಕೆಯಾಗುತ್ತಿರುವ 480 ಮೆಟ್ರಿಕ್ ಟನ್ ಆಕ್ಸಿಜನ್ ಸಾಕಾಗುತ್ತಿಲ್ಲ ಎಂದು ಕೋರ್ಟ್ ಹೇಳಿದೆ.

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ, ಮೇ ಮತ್ತು ಜೂನ್ ತಿಂಗಳಲ್ಲಿ ಕೊರೋನಾ ಸೋಂಕು ಇನ್ನಷ್ಟು ವಿಸ್ತಾರವಾಗಿ ಹರಡಬಹುದು, ಇನ್ನಷ್ಟು ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ದೇಶ ಸಜ್ಜಾಗಬೇಕು, ಸರ್ಕಾರ ಆಕ್ಸಿಜನ್ ನ್ನು ಆಮದು ಮಾಡಿಕೊಳ್ಳಲು ಮತ್ತು ಇಲ್ಲಿ ಆಕ್ಸಿಜನ್ ನ್ನು ಉತ್ಪತ್ತಿ ಮಾಡಲು ಹಗಲು ರಾತ್ರಿ ಎಡೆಬಿಡದೆ ಕೆಲಸ ಮಾಡುತ್ತಿದೆ ಎಂದರು.

ದೆಹಲಿಯ ಮಹಾರಾಜ ಅಗ್ರಸೇನ ಆಸ್ಪತ್ರೆ, ಜೈಪುರ್ ಗೋಲ್ಡನ್ ಆಸ್ಪತ್ರೆ, ಬಟ್ರಾ ಆಸ್ಪತ್ರೆ, ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿವೆ, ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ ಎಂದು ಹೇಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಿನ್ನೆ ನಡೆಸಿ ಸರ್ಕಾರಗಳಿಗೆ ಆದೇಶ ನೀಡಿದೆ. 

ರಾಜ್ಯ ಸರ್ಕಾರಗಳು ಟ್ಯಾಂಕರ್ ಗಳ ವ್ಯವಸ್ಥೆ ಮಾಡುತ್ತಿವೆ. ನಾವು ರಾಜ್ಯಗಳಿಗೆ ಸಹಾಯ ಮಾಡುತ್ತಿದ್ದೇವೆ. ಆದರೆ ದೆಹಲಿಯಲ್ಲಿ ಎಲ್ಲವನ್ನೂ ನಮ್ಮ ಮೇಲೆ ಹಾಕುತ್ತಿದ್ದಾರೆ. ದೆಹಲಿ ಸರ್ಕಾರದ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com