ದುರದೃಷ್ಟಕರ ಪರಿಸ್ಥಿತಿ: ಸಂಸತ್ ನಲ್ಲಿ ಕಡಿಮೆ ಚರ್ಚೆ ಕುರಿತು ಸಿಜೆಐ ಬೇಸರ

ಸಂಸತ್ ಹಾಗೂ ರಾಜ್ಯದ ವಿಧಾನಸಭೆಗಳಲ್ಲಿ ಚರ್ಚೆಗಳು ಕಡಿಮೆಯಾಗಿರುವುದರ ಬಗ್ಗೆ  ಸಿಜೆಐ ಎನ್ ವಿ ರಮಣ ಆತಂಕ ವ್ಯಕ್ತಪಡಿಸಿದ್ದು "ದುರದೃಷ್ಟಕರ" ಎಂದು ಹೇಳಿದ್ದಾರೆ. 
ಸಿಜೆಐ ಎನ್ ವಿ ರಮಣ
ಸಿಜೆಐ ಎನ್ ವಿ ರಮಣ

ನವದೆಹಲಿ: ಸಂಸತ್ ಹಾಗೂ ರಾಜ್ಯದ ವಿಧಾನಸಭೆಗಳಲ್ಲಿ ಚರ್ಚೆಗಳು ಕಡಿಮೆಯಾಗಿರುವುದರ ಬಗ್ಗೆ  ಸಿಜೆಐ ಎನ್ ವಿ ರಮಣ ಆತಂಕ ವ್ಯಕ್ತಪಡಿಸಿದ್ದು "ದುರದೃಷ್ಟಕರ" ಎಂದು ಹೇಳಿದ್ದಾರೆ. 

75 ನೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, "ಚರ್ಚೆಯೇ ಇಲ್ಲದಿದ್ದರೆ ಕಾನೂನಿನ ಹಲವು ಅಂಶಗಳನ್ನು ಸ್ಪಷ್ಟಪಡಿಸುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗೂ ಕೋರ್ಟ್ ಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ" ಎಂದು ನ್ಯಾ.ಎನ್.ವಿ ರಮಣ ಅಭಿಪ್ರಾಯಪಟ್ಟಿದ್ದಾರೆ. 

ಕಾನೂನು ಮಾಡುವ ವೇಳೆ ಅವುಗಳ ಬಗ್ಗೆ ಸುದೀರ್ಘ ಚರ್ಚೆಗಳಿಂದಾಗಿ ಕಾನೂನನ್ನು ವ್ಯಾಖ್ಯಾನ ಮಾಡುವಾಗ ಕೋರ್ಟ್ ಗಳಿಗೆ ವಿವಾದ, ಗೊಂದಲಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಬಹುದು, ಶಾಸಕಾಂಗದ ಉದ್ದೇಶ ನಮಗೆಲ್ಲರಿಗೂ ತಿಳಿದಿದೆ ಎಂದು ನ್ಯಾ.ರಮಣ ಹೇಳಿದ್ದು ನ್ಯಾಯಾಂಗದಲ್ಲಿರುವವರಿಗೆ ಸಾರ್ವಜನಿಕರೊಂದಿಗೆ ಬೆರೆತು ಕಾನೂನಿಗೆ ಸಂಬಂಧಿಸಿದ ಅನುಭವಗಳನ್ನು ಹಂಚಿಕೊಳ್ಳುವಂತೆ ಕರೆ ನೀಡಿದ್ದಾರೆ. 

ದೇಶದ ಸ್ವಾತಂತ್ರ್ಯ ಹೋರಾಟವನ್ನು ವಕೀಲರು ಮುನ್ನಡೆಸಿದ್ದರು, ಮಹಾತ್ಮ ಗಾಂಧಿ ಅಥವಾ ಬಾಬು ರಾಜೇಂದ್ರ ಪ್ರಸಾದ್ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಲವು ಮಂದಿ ತಮ್ಮ ಜೀವನ, ಸಂಪತ್ತನ್ನು ತ್ಯಾಗ ಮಾಡಿ ಹೋರಾಡಿದರು ಎಂದು ನ್ಯಾ. ರಮಣ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದ್ದಾರೆ. 

"ಲೋಕಸಭೆ, ರಾಜ್ಯಸಭೆಯ ಸದಸ್ಯರ ಪೈಕಿ ಬಹುತೇಕ ಮಂದಿ ವಕೀಲರು ಹಾಗೂ ಕಾನೂನಿನ ಭಾಗವಾಗಿರುವವರು. ಆದರೆ ದುರದೃಷ್ಟಕರವಾಗಿ ಸಂಸತ್ ನಲ್ಲಿ ಚರ್ಚೆ ಹಾಗೂ ಕಾನೂನುಗಳಿಗೆ ಸಂಬಂಧಿಸಿದಂತೆ ಏನಾಗುತ್ತಿದೆ ಎಂಬುದು ನಮಗೆ ತಿಳಿದಿದೆ" ಎಂದು ಎನ್ ವಿ ರಮಣ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com