ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಪುನರುತ್ಥಾನದಿಂದ ಕಾಶ್ಮೀರದಲ್ಲಿ ಉಗ್ರರಿಗೆ ಉತ್ತೇಜನ: ತಜ್ಞರು

ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಕಾಶ್ಮೀರದಲ್ಲಿನ ಭದ್ರತೆ ಹಾಗೂ ಉಗ್ರರ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭದ್ರತಾ ತಜ್ಞರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
ಭಾರತದಲ್ಲಿರುವ ಅಫ್ಘಾನಿಸ್ತಾನದ  ರಾಯಭಾರ ಕಚೇರಿ ಎದುರು ಬಿಗಿ ಭದ್ರತೆ
ಭಾರತದಲ್ಲಿರುವ ಅಫ್ಘಾನಿಸ್ತಾನದ ರಾಯಭಾರ ಕಚೇರಿ ಎದುರು ಬಿಗಿ ಭದ್ರತೆ

ನವದೆಹಲಿ: ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ಕಾಶ್ಮೀರದಲ್ಲಿನ ಭದ್ರತೆ ಹಾಗೂ ಉಗ್ರರ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭದ್ರತಾ ತಜ್ಞರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 
 
ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಗಳು ಕಣಿವೆ ರಾಜ್ಯದಲ್ಲಿ ಹಲವು ರೀತಿಯ ಅಪಾಯಗಳನ್ನು ತಂದೊಡ್ಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. 

ಈ ಬೆಳವಣಿಗೆಗಳ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸ್ ಮುಖ್ಯಸ್ಥ ಎಸ್ ಪಿ ವೈದ್ ಮಾತನಾಡಿದ್ದು, ಪಾಕ್ ಆಕ್ರಮಿತ ಕಾಶ್ಮೀರದಿಂದ ಈಗ ಪಾಕಿಸ್ತಾನ ತನ್ನ ಭಯೋತ್ಪಾದಕರ ಶಿಬಿರಗಳನ್ನು ಆಫ್ಘಾನಿಸ್ತಾನಕ್ಕೆ ವರ್ಗಾವಣೆ ಮಾಡಲಿದ್ದು, ಈ ಮೂಲಕ ಕಾಶ್ಮೀರದಲ್ಲಿನ ಹಿಂಸಾಚಾರಕ್ಕೂ ತನಗೂ ಸಂಬಂಧವಿಲ್ಲ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಲಿದೆ. ಭಾರತ ವಿರೋಧಿ ಭಯೋತ್ಪಾದಕ ಗುಂಪುಗಳಿಗೆ ಈಗ ಆಫ್ಘಾನಿಸ್ತಾನ ಸುರಕ್ಷಿತ ಪ್ರದೇಶವಾಗಲಿದೆ ಎಂದು ವಿಶ್ಲೇಷಿಸಿದ್ದಾರೆ. 

9/11 ಮಾದರಿಯ ಕಾರ್ಯಾಚರಣೆ ನಡೆಸಲು ಹಾಗೂ ಕಾಶ್ಮೀರದಲ್ಲಿರುವ ಭಯೋತ್ಪಾದಕರನ್ನು ಉತ್ತೇಜಿಸಲು ಈಗ ಅಫ್ಘಾನಿಸ್ತಾನದ ನೆಲ ಬಳಕೆಯಾಗಲಿದೆ. ಪಾಕಿಸ್ತಾನ ಈಗ ತಾಲೀಬಾನ್ ನ ಒಂದಷ್ಟು ಶ್ರೇಣಿಯ ಉಗ್ರರನ್ನು ಜಮ್ಮು-ಕಾಶ್ಮೀರಕ್ಕೆ ಕಳಿಸಿ ಉಗ್ರವಾದವನ್ನು ಉತ್ತೇಜಿಸುವ ಕೆಲಸಕ್ಕೆ ಕೈಹಾಕಬಹುದು. 

9/11 ದಾಳಿ ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಆಡಳಿತವಿದ್ದಾಗ ಉಂಟಾಗಿತ್ತು. ಆದ್ದರಿಂದ ಈ ರೀತಿಯ ಮತ್ತೊಂದು ಭಯಾಕನ ಕೃತ್ಯ ನಡೆಯುವುದಿಲ್ಲ ಎಂಬುದಕ್ಕೆ ಏನು ಖಾತ್ರಿ? ಎನ್ನುತ್ತಾರೆ ತಜ್ಞರು. 

ಹಿರಿಯ ರಕ್ಷಣಾ ವಿಶ್ಲೇಷಕರಾದ ಮೇಜರ್ ಜನರಲ್ ಎಸ್ ಬಿ ಆಸ್ತಾನ (ನಿವೃತ್ತ) ಆಫ್ಘಾನಿಸ್ತಾನದಿಂದ ಭಯೋತ್ಪಾದನೆಯ ರಫ್ತು ನಾವು ಅಂದುಕೊಂಡಿದ್ದಕ್ಕಿಂತಲೂ ಕ್ಷಿಪ್ರವಾಗಿ ನಡೆಯಬಹುದು. ತಾಲೀಬಾನ್ ಪಾಕಿಸ್ತಾನದ ಬಗ್ಗೆ ಮೃದು ಧೋರಣೆಯನ್ನೇನೂ ಅನುಸರಿಸುವುದಿಲ್ಲ ಆದ್ದರಿಂದ ಇದರ ಮೊದಲ ಬಲಿಪಶು ಪಾಕಿಸ್ತಾನವೇ ಆಗುವ ಸಾಧ್ಯತೆಗಳಿವೆ ಎನ್ನುತಾರೆ ಮೇಜರ್ ಜನರಲ್ ಎಸ್ ಬಿ ಆಸ್ತಾನ.

ಕಳೆದ ಕೆಲವು ವರ್ಷಗಳಿಂದ ವಿಶ್ವಸಂಸ್ಥೆಯಿಂದ ಪ್ರಕಟಗೊಂಡಿರುವ ವರದಿಗಳ ಪೈಕಿ ಜೈಶ್-ಎ ಮೊಹಮ್ಮದ್ ಹಾಗೂ ಲಷ್ಕರ್-ಎ-ತೈಯ್ಬಾ  ತಾಲಿಬಾನ್ ಜೊತೆಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. 

ಮತ್ತೋರ್ವ ಸೇನಾ ನಿವೃತ್ತ ಅಧಿಕಾರಿ, ಸೇನಾ ಕಾರ್ಯತಂತ್ರ ವಿಶ್ಲೇಷಕರಾದ ಪ್ರವೀಣ್ ಸಾಹ್ನಿ ಅವರು ಹೇಳುವ ಪ್ರಕಾರ ಅಫ್ಘಾನಿಸ್ತಾನದಲ್ಲಿ ತಾಲೀಬಾನ್ ಗೆ ಈಗ ಅಂತಾರಾಷ್ಟ್ರೀಯ ಸಮುದಾಯದತ್ತ ಸಹಕಾರಕ್ಕಾಗಿ ಕೈ ಚಾಚುವ ಅನಿವಾರ್ಯ ಉಂಟಾಗುವುದರಿಂದ ಸದ್ಯಕ್ಕೆ ಕಾಶ್ಮೀರದ ಮೇಲೆ ತಾಲೀಬಾನ್ ನ ನೇರ ಪರಿಣಾಮ ಇರುವುದಿಲ್ಲ ಹಾಗೂ ಹೊಸ ಪ್ರಾದೇಶಿಕ ರಾಜಕೀಯದ ಪರಿಣಾಮಗಳಿಂದ ಕಾಶ್ಮೀರ ದೂರ ಉಳಿಯಲು ಸಾಧ್ಯಾವಗಲಿದೆ. 

ಜಮ್ಮು-ಕಾಶ್ಮೀರದಲ್ಲಿ ನಮ್ಮದೇ ಆದ ಸಮಸ್ಯೆಗಳಿವೆ, ಅತಿ ದೊಡ್ಡ ಸಮಸ್ಯೆಯೆಂದರೆ ಬಂಡಾಯ ಹಾಗೂ ಭಯೋತ್ಪಾದನೆಯನ್ನು ಗುರುತಿಸುವುದಾಗಿದೆ. ಕಾಶ್ಮೀರದಲ್ಲಿರುವ ಸಮಸ್ಯೆ ಬಂಡಾಯದ್ದು. ಅಲ್ಲಿ ಆಗುತ್ತಿರುವುದಕ್ಕೆ ಜನರ ಬೆಂಬಲವಿದೆ. ಯಾವುದೇ ಪ್ರಕರಣದಲ್ಲಿಯೂ ಕಾಶ್ಮೀರದ ಪರಿಸ್ಥಿತಿ ಅಸ್ಥಿರ ಹಾಗೂ ಜನರಲ್ಲಿ ತಮ್ಮನ್ನು ಪರಾಧೀನ ಮಾಡಲ್ಪಟ್ಟ ಅಭಿಪ್ರಾಯವಿದೆ ಎಂಬುದು ನನ್ನ ಅಂದಾಜು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com