ಸಿಂಘು ಗಡಿಯಲ್ಲಿ ಕೃಷಿ ಕಾನೂನುಗಳ ವಿರುದ್ಧದ ಹೋರಾಟಕ್ಕೆ 9 ತಿಂಗಳು: ರೈತರಿಂದ ರಾಷ್ಟ್ರೀಯ ಸಮಾವೇಶ
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಸಿಂಗು ಗಡ್ಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 9ನೇ ತಿಂಗಳಿಗೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲ್ಲಿ ರೈತರು ರಾಷ್ಟ್ರೀಯ ಸಮಾವೇಶ ಆಯೋಜಿಸಿದ್ದಾರೆ.
Published: 26th August 2021 02:31 PM | Last Updated: 26th August 2021 02:31 PM | A+A A-

ರೈತರ ಪ್ರತಿಭಟನೆ
ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಸಿಂಘು ಗಡ್ಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 9ನೇ ತಿಂಗಳಿಗೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲ್ಲಿ ರೈತರು ರಾಷ್ಟ್ರೀಯ ಸಮಾವೇಶ ಆಯೋಜಿಸಿದ್ದಾರೆ.
ಇಂದಿನಿಂದ ಆರಂಭವಾಗಿರುವ ಎರಡು ದಿನಗಳ ಈ ಸಮಾವೇಶ ಉದ್ಘಾಟನೆ ಸೇರಿದಂತೆ ಮೂರು ಸೆಷನ್‌ಗಳನ್ನು ಹೊಂದಿದ್ದು, ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಮತ್ತು ವಿಸ್ತರಣೆ ಮಾಡುವ ಗುರಿ ಹೊಂದಿದೆ.
ಸಮಾವೇಶದಲ್ಲಿ ರೈತರು, ಮಹಿಳೆಯರು, ಯುವಕರು ಮತ್ತು ಕಾರ್ಮಿಕರ ಸಂಘಟನೆಗಳು ಸೇರಿದಂತೆ ದೇಶಾದ್ಯಂತ 1,500 ಪ್ರತಿನಿಧಿಗಳು ಭಾಗವಹಿಸುವ ಸಾಧ್ಯತೆ ಇದೆ.
ಎಲ್ಲಾ ಮೂರು ಕಾರ್ಪೊರೇಟ್ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು, ಎಲ್ಲಾ ಬೆಳೆಗಳ ಬೆಂಬಲ ಬೆಲೆ ಖಾತರಿಪಡಿಸಲು ಎಂಎಸ್‌ಪಿ ಕಾನೂನು ಜಾರಿ, ವಿದ್ಯುತ್ ಬಿಲ್ 2021 ರದ್ದು ಸೇರಿದಂತೆ ಹಲವು ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚಿಸುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು ಕಳೆದ ವರ್ಷ ನವೆಂಬರ್ ನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.