ಪತ್ನಿಯೊಂದಿಗಿನ ಒತ್ತಾಯಪೂರ್ವಕ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಹೈಕೋರ್ಟ್

ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೂ ಅದು ಅತ್ಯಾಚಾರವೆನಿಸಿಕೊಳ್ಳುವುದಿಲ್ಲ ಎಂಬ ತೀರ್ಪು ನೀಡುವ ಮೂಲಕ ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧವೇ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ಛತ್ತೀಸ್ ಗಢ ಹೈಕೋರ್ಟ್ ವಜಾಗೊಳಿಸಿದೆ.
ಅತ್ಯಾಚಾರ
ಅತ್ಯಾಚಾರ

ರಾಯ್ ಪುರ: ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೂ ಅದು ಅತ್ಯಾಚಾರವೆನಿಸಿಕೊಳ್ಳುವುದಿಲ್ಲ ಎಂಬ ತೀರ್ಪು ನೀಡುವ ಮೂಲಕ ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧವೇ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ಛತ್ತೀಸ್ ಗಢ ಹೈಕೋರ್ಟ್ ವಜಾಗೊಳಿಸಿದೆ.

ಆದರೆ ಆತನ ವಿರುದ್ಧ ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ದಾಖಲಾಗಿದ್ದ ಅಸ್ವಾಭಾವಿಕ ಅಪರಾಧ ಪ್ರಕರಣವನ್ನು ಕೈಬಿಡುವುದಕ್ಕೆ ಹೈಕೋರ್ಟ್ ನಿರಾಕರಿಸಿದೆ. 

ನ್ಯಾ.ಎನ್ ಕೆ ಚಂದ್ರವಂಶಿ ಅವರಿದ್ದ ಪೀಠ ಆ.23 ರಂದು ಈ ಆದೇಶ ನೀಡಿದ್ದು ವ್ಯಕ್ತಿಯೊಬ್ಬರು ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಅರ್ಜಿ ವಿಚಾರಣೆ ನಡೆಸುತ್ತಿತ್ತು.

ಸಂತ್ರಸ್ತೆ 2017 ರಲ್ಲಿ ರಾಯ್ ಪುರದ ಚಂದಗೋರ್ಭಟದ ವ್ಯಕ್ತಿಯೋರ್ವರನ್ನು ವಿವಾಹವಾಗಿದ್ದಳು. ಕೆಲವು ದಿನಗಳ ನಂತರ ಮಹಿಳೆಯ ಪತಿಯ ಕುಟುಂಬ ಸದಸ್ಯರು ಆಕೆಯನ್ನು ವರದಕ್ಷಿಣೆಗಾಗಿ ಪೀಡಿಸಲು ಆರಂಭಿಸಿದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರನ್ನೂ ದಾಖಲಿಸಿದ್ದರು.

ಸೆಕ್ಷನ್ 498-ಎ (ವರದಕ್ಷಿಣೆ ಕಿರುಕುಳ) ಸೆಕ್ಷನ್ 377 (ಅಸ್ವಾಭಾವಿಕ ಕ್ರಿಯೆಗಳ ಅಪರಾಧ) ಸೆಕ್ಷನ್ 376 (ಅತ್ಯಾಚಾರ)ದ ಅಡಿ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು.

ಸೆಕ್ಷನ್ 375 ರ ಎಕ್ಸೆಪ್ಷನ್ II ರ ಪ್ರಕಾರ ಯಾವುದೇ ವ್ಯಕ್ತಿ ತನ್ನ 18 ವರ್ಷ ವಯಸ್ಸಿನ ಪತ್ನಿಯೊಂದಿಗೆ, ಆಕೆಯ ಇಚ್ಛೆಗೆ ವಿರುದ್ಧವಾಗಿ, ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅತ್ಯಾಚಾರವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಈ ಪ್ರಕರಣದಲ್ಲಿ ಈ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ)ದ ಆರೋಪ ತಪ್ಪಾಗಿದ್ದು ಅಕ್ರಮವೂ ಹೌದು ಎಂದು ನ್ಯಾಯಾಲಯ ಹೇಳಿದೆ.

ಇದೇ ಪ್ರಕರಣದಲ್ಲಿ ವ್ಯಕ್ತಿಯ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಆರೋಪವನ್ನೂ ಸಂತ್ರಸ್ತ ಮಹಿಳೆ ಮಾಡಿದ್ದನ್ನು ಕೋರ್ಟ್ ಮಾನ್ಯ ಮಾಡಿದ್ದು ಈ ವಿಷಯದಲ್ಲಿ ವ್ಯಕ್ತಿಯ ವಿರುದ್ಧ ದಾಖಲಾಗಿರುವ ಆರೋಪ ಸರಿಯಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com