ನೂತನ ಕೃಷಿ ಕಾನೂನುಗಳಿಂದ ಬಿಜೆಪಿಯ ಕೋಟ್ಯಾಧಿಪತಿ ಸ್ನೇಹಿತರಿಗಷ್ಟೇ ಲಾಭ, ರೈತರಿಗಲ್ಲ: ಪ್ರಿಯಾಂಕಾ ಗಾಂಧಿ ವಾದ್ರಾ

ನೂತನ ಕೃಷಿ ಕಾನೂನುಗಳಿಂದ ಬಿಜೆಪಿಯ ಕೋಟ್ಯಾಧಿಪತಿ ಸ್ನೇಹಿತರಿಗಷ್ಟೇ ಲಾಭ ತಂದುಕೊಡಲಿದ್ದು, ರೈತರಿಗೆ ಅಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ
ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ

ನವದೆಹಲಿ: ನೂತನ ಕೃಷಿ ಕಾನೂನುಗಳಿಂದ ಬಿಜೆಪಿಯ ಕೋಟ್ಯಾಧಿಪತಿ ಸ್ನೇಹಿತರಿಗಷ್ಟೇ ಲಾಭ ತಂದುಕೊಡಲಿದ್ದು, ರೈತರಿಗೆ ಅಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,  ಬಿಜೆಪಿಯ ಕೋಟ್ಯಧಿಪತಿ ಸ್ನೇಹಿತರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ನೂತನ ಮೂರು ಕೃಷಿ ಕಾನೂನುಗಳನ್ನು ರೂಪಿಸಿದೆ. ಹಿಮಾಚಲ ಪ್ರದೇಶದಲ್ಲಿ ಅದಾನಿ, ಪ್ರತಿ ಕೆ.ಜಿ ಸೇಬು ದರವನ್ನು 16ರೂ  ಕಡಿಮೆ ಮಾಡಿರುವ ವರದಿಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, ರೈತರ ಉತ್ಪನ್ನಗಳನ್ನು ನಿರ್ಧರಿಸುವ ಹಕ್ಕನ್ನು ಆಡಳಿತ ಪಕ್ಷದ ಕೋಟ್ಯಧಿಪತಿ ಸ್ನೇಹಿತರಿಗೆ ನೀಡಿದರೆ ಹೀಗೆ ಆಗುತ್ತದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ರೈತರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ ಮೂರು 'ಕಪ್ಪು' ಕೃಷಿ ಕಾನೂನುಗಳನ್ನು ರೈತರು ಏಕೆ ವಿರೋಧಿಸುತ್ತಿದ್ದಾರೆ? ಯಾಕೆಂದರೆ ರೈತರ ಶ್ರಮದಿಂದ ಬೆಳೆದ ಬೆಳೆಗಳಿಗೆ ಬೆಲೆ ಮತ್ತು ಇತರ ವಸ್ತುಗಳನ್ನು ನಿರ್ಧರಿಸುವ ಹಕ್ಕನ್ನು ಬಿಜೆಪಿಯ ಕೋಟ್ಯಧಿಪತಿ ಗೆಳೆಯರಿಗೆ ನೀಡಿದರೆ ಇದು ಸಂಭವಿಸುತ್ತದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇನ್ನು ಈ ಹಿಂದೆ ಇದೇ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕೂಡಲೇ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದ್ದರು. 'ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ಕೃಷಿ ವಿರೋಧಿಯಾಗಿದೆ. ವಿವಾದಿತ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಒಂಬತ್ತು ತಿಂಗಳು ಪೂರ್ಣಗೊಂಡಿದೆ. ಈ ನಡುವೆ ರೈತರ ಪರ ಮಗದೊಮ್ಮೆ ಧ್ವನಿ ಎತ್ತಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರವು ಬಂಡವಾಳಶಾಹಿಯನ್ನು ಉತ್ತೇಜಿಸುತ್ತಿದೆ ಎಂದು ಹೇಳಿದ್ದರು.

ಅಲ್ಲದೆ ಇದೇ ವಿಚಾರವಾಗಿ ಟ್ವೀಟ್ ಮಾಡಿ, ಹೊಲಗಳು ಮರಳು ಆಗಲು ಬಿಡುವುದಿಲ್ಲ, ಅದನ್ನು ಅವರ (ಬಿಜೆಪಿ) ಸ್ನೇಹಿತರಿಗೆ ಉಡುಗೊರೆಯಾಗಿ ನೀಡಲು ಬಿಡುವುದಿಲ್ಲ. ಕೃಷಿ ವಿರೋಧಿ ಕಾನೂನುಗಳನ್ನು ಹಿಂಪಡೆಯಿರಿ. ಕೇಂದ್ರ ಸರ್ಕಾರವು ಕೃಷಿ ಭೂಮಿಯನ್ನು ತಮ್ಮ ಸ್ನೇಹಿತರಿಗೆ ಹಸ್ತಾಂತರಿಸುವ ಹುನ್ನಾರವನ್ನು ಹೊಂದಿದೆ. ಕೃಷಿ ವ್ಯವಸ್ಥೆಯನ್ನು ನಾಶಗೊಳಿಸಲು ನೂತನ ಕಾನೂನು ರಚಿಸಲಾಗಿದೆ ಎಂದು ಟೀಕಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com