ಭಾರತದಲ್ಲಿ ಜೈಲುಪಾಲಾಗಿದ್ದ ಇಬ್ಬರು ಪಾಕ್ ಪ್ರಜೆಗಳ ಬಿಡುಗಡೆ, ವಾಘಾ ಗಡಿ ಮೂಲಕ ಸುರಕ್ಷಿತವಾಗಿ ಹಸ್ತಾಂತರ
ಆಕಸ್ಮಿಕವಾಗಿ ಗಡಿ ದಾಟಿ ಬಂದು ಭಾರತದ ಜೈಲುಪಾಲಾಗಿದ್ದ ಪಾಕಿಸ್ತಾನ ಮೂಲದ ಇಬ್ಬರು ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಗಿದ್ದು, ಅಠಾರಿ-ವಾಘಾಗಡಿ ಮೂಲಕ ಪಾಕಿಸ್ತಾನಕ್ಕೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.
Published: 29th August 2021 10:41 AM | Last Updated: 29th August 2021 10:41 AM | A+A A-

ಪಾಕ್ ಪ್ರಜೆಗಳ ಬಿಡುಗಡೆ
ನವದೆಹಲಿ: ಆಕಸ್ಮಿಕವಾಗಿ ಗಡಿ ದಾಟಿ ಬಂದು ಭಾರತದ ಜೈಲುಪಾಲಾಗಿದ್ದ ಪಾಕಿಸ್ತಾನ ಮೂಲದ ಇಬ್ಬರು ವ್ಯಕ್ತಿಗಳನ್ನು ಬಿಡುಗಡೆ ಮಾಡಲಾಗಿದ್ದು, ಅಠಾರಿ-ವಾಘಾಗಡಿ ಮೂಲಕ ಪಾಕಿಸ್ತಾನಕ್ಕೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.
ಇಬ್ಬರ ಜೈಲು ಅವಧಿ 2 ವರ್ಷ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರ ಪೈಕಿ ಓರ್ವ ಅಪ್ರಾಪ್ತ ವಯಸ್ಕನಾಗಿದ್ದು, ಎರಡು ವರ್ಷಗಳ ಹಿಂದೆ ರಾಜಸ್ಥಾನದಿಂದ ಅಜಾಗರೂಕತೆಯಿಂದ ಭಾರತದ ಗಡಿಯನ್ನು ದಾಟಿದ್ದ ಎನ್ನಲಾಗಿದೆ.
ಪಾಕಿಸ್ತಾನದ ಪ್ರಜೆಗಳಾದ ಅಬ್ಬಾಸ್ ಅಲಿ ಖಾನ್ (42) ಮತ್ತು ಭಾಗ್ ಚಂದ್ (17) ಎಂಬುವವರನ್ನು ಅಠಾರಿ ಗಡಿಯ ಪ್ರೋಟೋಕಾಲ್ ಅಧಿಕಾರಿ ಅರುಣ್ ಪಾಲ್ ಸಿಂಗ್ ನೇತೃತ್ವದಲ್ಲಿ ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಿಂಗ್ ಅವರು, '2005 ರಲ್ಲಿ, ಪಾಕಿಸ್ತಾನದ ರಹೀಮ್ ಯಾರ್ ಖಾನ್ ನಿಂದ ಬಂದ ಅಬ್ಬಾಸ್ ಅಲಿ ಖಾನ್, ಒಂದು ತಿಂಗಳ ವೀಸಾದಲ್ಲಿ ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ ದೆಹಲಿಗೆ ಬಂದಿದ್ದರು. ನಂತರ, ಅವರು ಗ್ವಾಲಿಯರ್‌ಗೆ ತೆರಳಿದ್ದರು ಮತ್ತು ಆ ವೇಳೆಗೆ ವೀಸಾ ಮಾನ್ಯತೆ ಅವಧಿ ಮುಗಿದಿತ್ತು. ಗ್ವಾಲಿಯರ್ ಪೊಲೀಸರು ಆತನನ್ನು ಬಂಧಿಸಿ 16 ವರ್ಷಗಳ ಕಾಲ ಗ್ವಾಲಿಯರ್ ಸೆಂಟ್ರಲ್ ಜೈಲಿನಲ್ಲಿ ಇರಿಸಿದ್ದರು. ಮತ್ತೋರ್ವ ಪ್ರಜೆ ಭಾಗ್ ಚಂದ್ ಅಜಾಗರೂಕತೆಯಿಂದ ರಾಜಸ್ಥಾನದ ಗಡಿಯನ್ನು ದಾಟಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಸಿಂಗ್ ಹೇಳಿದರು.