ಕಾಶ್ಮೀರದಲ್ಲಿ ಬೃಹತ್ ವಿಧ್ವಂಸಕ ಕೃತ್ಯ ನಡೆಸಲು ಉಗ್ರರಿಂದ ಸಂಚು: ಗುಪ್ತಚರ ಇಲಾಖೆ ಎಚ್ಚರಿಕೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಬೃಹತ್ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಬೃಹತ್ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಕಳೆದ 15 ದಿನಗಳಲ್ಲಿ ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳು ತೀವ್ರಗೊಂಡಿದ್ದು, ತಮಗೆ ಲಭಿಸಿರುವ ಮಾಹಿತಿ ಮೇರೆಗೆ ಉಗ್ರರು ಕಾಶ್ಮೀರ ಕಣಿವೆಯಲ್ಲಿ ಏನಾದರೂ "ದೊಡ್ಡದನ್ನು" ಯೋಜಿಸುತ್ತಿರುವ ಸಾಧ್ಯತೆ ಇದೆ ಎಂದು ಹೇಳಿದೆ. 

ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಗುಪ್ತಚರ ಸಂಸ್ಥೆಗಳ ಸಿಬ್ಬಂದಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಯೋಜಿಸುತ್ತಿರುವ ಭಯೋತ್ಪಾದಕರ ಚಲನವಲನದ ಕುರಿತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಸಕ್ರಿಯವಾಗಿರುವ ತಮ್ಮ ಸಹವರ್ತಿಗಳಿಂದ ಸಮಗ್ರ ವರದಿಗಳನ್ನು ಪಡೆದಿದ್ದಾರೆ. ಕಳೆದ 15 ದಿನಗಳಲ್ಲಿ ಗಡಿ ಪ್ರದೇಶಗಳ ಬಳಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕಿತರ ಬಗ್ಗೆ ಸುಮಾರು 10 ಎಚ್ಚರಿಕೆಗಳನ್ನು ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುವಂತೆ ನಾವು ಸಂಬಂಧಪಟ್ಟ ಭದ್ರತಾ ಏಜೆನ್ಸಿಗಳಿಗೆ ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.

ನಾವು ಸಾಮಾಜಿಕ ಮಾಧ್ಯಮದಲ್ಲಿ ಚಟುವಟಿಕೆಗಳಲ್ಲಿ ಹಠಾತ್ ಏರಿಕೆಗೆ ಸಾಕ್ಷಿಯಾಗಿದ್ದೇವೆ. ಕಣಿವೆಯಲ್ಲಿ ಯುವಕರನ್ನು ಉದ್ದೇಶಿಸಿ ಹಲವಾರು ದೃಢೀಕರಿಸದ ವೀಡಿಯೊಗಳು ಈ ಪ್ರದೇಶದಲ್ಲಿ ವೈರಲ್ ಆಗಿವೆ. ನಾವು ಅಂತಹ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದೇವೆ ಮತ್ತು ಅಂತಹ ವೀಡಿಯೊಗಳನ್ನು ವರದಿ ಮಾಡುವಂತೆ ಜನರನ್ನು ವಿನಂತಿಸುತ್ತಿದ್ದೇವೆ. ಶಾಂತಿ ಕದಡುವ ಯಾವುದೇ ಯೋಜನೆಗೆ ಆಸ್ಪದ ನೀಡುವುದಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. 

ಈಗಾಗಲೇ ಕಣಿವೆಯಲ್ಲಿ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಇತರೆ ಭಯೋತ್ಪಾದಕ ಸಂಘಟನೆಗಳ ಉಗ್ರರ ಚಲನವಲನಗಳ ಮೇಲೆ ಗುಪ್ತಚರ ಸಂಸ್ಥೆಗಳು ತೀವ್ರ ನಿಗಾ ಇರಿಸಿವೆ.  ಅಲ್ಲದೆ ಸಂಭವನೀಯ ಗ್ರೆನೇಡ್ ದಾಳಿಗಳು ಅಥವಾ ಅದಕ್ಕಿಂತಲೂ ದೊಡ್ಡದಾದ ದಾಳಿ, ಭದ್ರತಾ ಸಿಬ್ಬಂದಿ, ಸುಧಾರಿತ ಸ್ಫೋಟಕ ಸಾಧನ ದಾಳಿ ಮತ್ತು ಶ್ರೀನಗರದ ಯಾವುದೇ ಸಾರ್ವಜನಿಕ ಸ್ಥಳಗಳ ಮೇಲೆ ದಾಳಿಯಾಗುವ ಕುರಿತು ಭದ್ರತಾ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ.

ಮತ್ತೊಂದು ಗುಪ್ತಚರ ವರದಿಯಲ್ಲಿ ಜೈಶ್ ಇ ಮೊಹಮದ್ ನ ಐವರು ಭಯೋತ್ಪಾದಕರು ಗೈಡ್ ಜೊತೆಗೆ ಪಿಒಕೆ ಯ ಜಾಂಡ್ರೋಟ್ ತಲುಪಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದಿಂದ ದೇಶಕ್ಕೆ ಪ್ರವೇಶಿಸಬಹುದು ಎಂದು ಉಲ್ಲೇಖಿಸಲಾಗಿದೆ.

ಆಗಸ್ಟ್ 15 ರಂದು, ಅಫ್ಘಾನಿಸ್ತಾನದಲ್ಲಿ ಸರ್ಕಾರ ಪತನಗೊಂಡಿತು ಮತ್ತು ತಾಲಿಬಾನ್ ದೇಶವನ್ನು ವಶಪಡಿಸಿಕೊಂಡಿತು. ಕಾಶ್ಮೀರ ವಿಚಾರವಾಗಿ ತಾಲಿಬಾನ್ ನಾಯಕರು ಪಾಕಿಸ್ತಾನ ಮತ್ತು ಅದರ ಕೃಪಾಪೋಷಿತ ಉಗ್ರರಿಗೆ ನೆರವು ನೀಡುವ ಕುರಿತ ಸುದ್ದಿಗಳು ವ್ಯಾಪಕವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com