
ಚಂಡೀಗಢ: ಇತ್ತೀಚಿಗೆ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಕಾರಿಗೆ ರೈತರು ಶುಕ್ರವಾರ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ರೈತ ವಿರೋಧಿ ಹೇಳಿಕೆ ನೀಡಿದ್ದ ನಟಿ ಕಂಗನಾ ಅವರು ಇಂದು ಪಂಜಾಬ್ ಗೆ ತೆರಳಿದ್ದರು. ಈ ವೇಳೆ ಕಿತಾರ್‌ಪುರ ಸಾಹಿಬ್ ಬಳಿ ರೈತರು ಅವರ ಕಾರಿಗೆ ಘೇರಾವ್ ಹಾಕಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ನಂತರ ನಟಿಯ ಕಾರು ತೆರಳಲು ಅವಕಾಶ ನೀಡಲಾಗಿದೆ.
ಕಂಗನಾ ಅವರು ಹಿಮಾಚಲ ಪ್ರದೇಶದ ಕುಲುವಿನಿಂದ ಚಂಡೀಗಢಕ್ಕೆ ತೆರಳುತ್ತಿದ್ದಾಗ ರೈತರು ಅವರ ಕಾರನ್ನು ತಡೆದಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್‌ನ ಸದಸ್ಯರು ಹಿಮಾಚಲ ಪ್ರದೇಶದ ಬಿಲಾಸ್‌ಪುರ್‌ನಿಂದ ನಟಿಯನ್ನು ಹಿಂಬಾಲಿಸುತ್ತಿದ್ದರು ಎಂದು ವರದಿಯಾಗಿದೆ. ನಟಿ ಬುಂಗಾ ಸಾಹಿಬ್ ತಲುಪಿದಾಗ ರೈತರು ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರಿನ ಮುಂದೆ ಧರಣಿ ನಡೆಸಿದರು ಎನ್ನಲಾಗಿದೆ.
ಕಂಗನಾ ಅವರು ಅರೆಸೇನಾ ಪಡೆಯ `ವೈ' ಕೆಟಗರಿ ಭದ್ರತೆಯನ್ನು ಹೊಂದಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಅವರ ವಾಹನವನ್ನು ತಡೆದು ನಿಲ್ಲಿಸಲಾಯಿತು. ನಂತರ ಭಾರೀ ಸಂಖ್ಯೆಯ ರಾಜ್ಯ ಪೊಲೀಸ್ ಪಡೆ ಕೂಡ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿತು ಎಂದು ಮೂಲಗಳು ತಿಳಿಸಿವೆ.
ಇಬ್ಬರು ಮಹಿಳಾ ಪ್ರತಿಭಟನಾಕಾರರು ನಟಿಯೊಂದಿಗೆ ಮಾತನಾಡಿದ ನಂತರ ಅವರು `ಕ್ಷಮೆಯಾಚಿಸಿದರು' ಎಂದು ರೈತರು ಹೇಳಿಕೊಂಡಿದ್ದಾರೆ. ಕಂಗನಾ ತನ್ನ ಕಾರಿನ ಕಿಟಕಿಯನ್ನು ಕೆಳಗಿಳಿಸಿ, ನೀವು ನನ್ನ `ತಾಯಿ' ಇದ್ದಂತೆ ಎಂದು ಹೇಳಿದ್ದರು ಮತ್ತು ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಏನನ್ನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಂತರ ಕಾರಿನಿಂದ ಹೊರಬಂದು ಮಹಿಳಾ ಪ್ರತಿಭಟನಾಕಾರರನ್ನು ಅಪ್ಪಿಕೊಂಡರು. ಬಳಿಕ ನಟಿಗೆ ಹೋಗಲು ಅನುಮತಿ ನೀಡಲಾಯಿತು’’ ಎಂದು ಹೆಸರು ಹೇಳಲು ಇಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement