ಕಾಂಗ್ರೆಸ್ ಇಲ್ಲದ ಮೈತ್ರಿಕೂಟ ರಚನೆ ಫ್ಯಾಸಿಸ್ಟ್ ಶಕ್ತಿಗಳಿಗೆ ಬಲ ತುಂಬಿದಂತೆ; ಮಮತಾ ಬ್ಯಾನರ್ಜಿಗೆ ಶಿವಸೇನೆ
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ನಡೆಸುತ್ತಿರುವ ಶಿವಸೇನೆ ರಾಷ್ಟ್ರಮಟ್ಟದಲ್ಲಿಯೂ ಬಿಜೆಪಿ ವಿರುದ್ಧದ ಮೈತ್ರಿಕೂಟದ ವಿಷಯದಲ್ಲಿ ಕಾಂಗ್ರೆಸ್ ಪರ ನಿಲ್ಲುವ ಸೂಚನೆ ನೀಡಿದೆ.
Published: 04th December 2021 05:01 PM | Last Updated: 04th December 2021 05:01 PM | A+A A-

ಮಮತಾ ಬ್ಯಾನರ್ಜಿ
ಮುಂಬೈ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ನಡೆಸುತ್ತಿರುವ ಶಿವಸೇನೆ ರಾಷ್ಟ್ರಮಟ್ಟದಲ್ಲಿಯೂ ಬಿಜೆಪಿ ವಿರುದ್ಧದ ಮೈತ್ರಿಕೂಟದ ವಿಷಯದಲ್ಲಿ ಕಾಂಗ್ರೆಸ್ ಪರ ನಿಲ್ಲುವ ಸೂಚನೆ ನೀಡಿದೆ.
ಬಿಜೆಪಿ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಪರ್ಯಾಯವಾಗಿ ಮೈತ್ರಿಕೂಟ ರಚನೆಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಯತ್ನಿಸುತ್ತಿದ್ದು, ಈ ಪ್ರಯತ್ನವನ್ನು ಶಿವಸೇನೆ ಟೀಕಿಸಿದೆ.
ಇತ್ತೀಚಿನ ದಿನಗಳಲ್ಲಿ ಮಮತಾ ಬ್ಯಾನರ್ಜಿ-ಕಾಂಗ್ರೆಸ್ ನಡುವಿನ ಶೀತಲ ಸಮರ ತೀವ್ರವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ರಾಷ್ಟ್ರೀಯ ರಾಜಕಾರಣದಿಂದ ಶತಮಾನಗಳಷ್ಟು ಹಿಂದಿನ ಪಕ್ಷವನ್ನು ದೂರವಿಟ್ಟು ಪರ್ಯಾಯ ಮೈತ್ರಿಕೂಟವನ್ನು ರಚಿಸಿವುದರಿಂದ ಆಡಳಿತಾರೂಢ ಬಿಜೆಪಿ ಹಾಗೂ ಫ್ಯಾಸಿಸ್ಟ್ ಶಕ್ತಿಗಳು ಬಲಿಷ್ಠಗೊಳ್ಳುವುದಕ್ಕೆ ಅವಕಾಶ ನೀಡಿದಂತಾಗಲಿದೆ ಎಂದು ಎಚ್ಚರಿಸಿದೆ.
ಮಮತಾ ಬ್ಯಾನರ್ಜಿ ನಡೆಯ ಬಗ್ಗೆ ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿನ ಸಂಪಾದಕೀಯದಲ್ಲಿ ಬರೆದಿರುವ ಶಿವಸೇನೆ, ಕಾಂಗ್ರೆಸ್ ನೇತೃತ್ವದ ಯುಪಿಎಗೆ ಪರ್ಯಾಯವಾಗಿ ಮೈತ್ರಿಕೂಟ ಬೇಕೆನ್ನುವವರು ಹಿಂದೆ ಮಾತನಾಡುವುದನ್ನು ಬಿಟ್ಟು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದೆ.
ಬಿಜೆಪಿ ವಿರುದ್ಧ ಹೋರಾಡುತ್ತಿರುವವರು ಕಾಂಗ್ರೆಸ್ ನ ಅಸ್ತಿತ್ವವೇ ಬೇಡ ಎನ್ನುವುದಾದರೆ ಈ ವರ್ತನೆ ದೊಡ್ಡ ಅಪಾಯ ಉಂಟುಮಾಡಲಿದೆ. ಒಂದು ವೇಳೆ ವಿಪಕ್ಷಗಳಲ್ಲಿ ಒಗ್ಗಟ್ಟು ಇಲ್ಲ ಎನ್ನುವುದಾದರೆ ಬಿಜೆಪಿಗೆ ಪರ್ಯಾಯವಾದುದ್ದನ್ನು ಸೃಷ್ಟಿಸುವ ಮಾತುಗಳನ್ನು ಬಂದ್ ಮಾಡಬೇಕೆಂದು ಶಿವಸೇನೆ ಎಚ್ಚರಿಸಿದೆ.