ಕೂಲ್ ಕ್ಯಾಪ್ಟನ್ ಧೋನಿ ಮನವಿಗೆ ಕ್ಷಣದಲ್ಲೇ ಓಕೆ ಎಂದಿದ್ದ ಸಿಡಿಎಸ್ ಬಿಪಿನ್ ರಾವತ್!
ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ 2 ವರ್ಷಗಳ ಹಿಂದೆ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕಗೊಂಡಿದ್ದರು. ಸೇನೆಯ ಪ್ರತಿಯೊಂದು ಹಂತಗಳನ್ನು ತಿಳಿದುಕೊಳ್ಳುವ ಹಾಗೂ ಪರಿಣಿತಿ ಪಡೆಯಬೇಕೆಂಬ ಆಸೆ ಧೋನಿ ಅವರದ್ದಾಗಿತ್ತು.
Published: 09th December 2021 02:19 PM | Last Updated: 09th December 2021 03:06 PM | A+A A-

ಬಿಪಿನ್ ರಾವತ್-ಎಂಎಸ್ ಧೋನಿ
ನವದೆಹಲಿ: ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ 2 ವರ್ಷಗಳ ಹಿಂದೆ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕಗೊಂಡಿದ್ದರು. ಸೇನೆಯ ಪ್ರತಿಯೊಂದು ಹಂತಗಳನ್ನು ತಿಳಿದುಕೊಳ್ಳುವ ಹಾಗೂ ಪರಿಣಿತಿ ಪಡೆಯಬೇಕೆಂಬ ಆಸೆ ಧೋನಿ ಅವರದ್ದಾಗಿತ್ತು.
ಅದರಂತೆ ದೇಶದ ಮೊದಲ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರು ಧೋನಿ ಮನವಿಯನ್ನು ಒಪ್ಪಿಕೊಂಡು ಸರಿಯಾದ ಸೇನಾ ತರಬೇತಿಗೆ ಅವಕಾಶ ನೀಡಿದ್ದರು. ಬಳಿಕ ಎರಡು ತಿಂಗಳ ಕಾಲ ಧೋನಿ ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿ ತರಬೇತಿ ಪಡೆಯಲು ಸಾಧ್ಯವಾಗಿತ್ತು.
ವೆಸ್ಟ್ ಇಂಡೀಸ್ ಪ್ರವಾಸ ಕೈಬಿಟ್ಟಿದ್ದ ಧೋನಿ
ಈ ಸಮಯದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಬೇಕಿತ್ತು. ಆದರೆ, ಸೇನಾ ತರಬೇತಿ ದೃಷ್ಟಿಯಿಂದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೋಗಲು ಸಾಧ್ಯವಿಲ್ಲ. ಮುಂದಿನ ಎರಡು ತಿಂಗಳನ್ನು ಭಾರತೀಯ ಸೇನೆ ಮೀಸಲಿಟ್ಟಿದ್ದೇನೆ ಅಂತಾ ಧೋನಿ ಬಿಸಿಸಿಐಗೆ ತಿಳಿಸಿದ್ದರು.
ಧೋನಿ ಬಗ್ಗೆ ಅಂದು ಜನರಲ್ ರಾವತ್ ಹೇಳಿದ್ದೇನು?
ಕೂಲ್ ಕ್ಯಾಪ್ಟನ್ ಧೋನಿ ಸೇನೆಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಬಿಪಿಎನ್ ರಾವತ್, 'ಧೋನಿ ಸೈನ್ಯದಲ್ಲಿ ತಮ್ಮ ಕರ್ತವ್ಯಗಳನ್ನು ಮಾಡುತ್ತಿದ್ದಾರೆ. ಇತರ ಸೈನಿಕರಂತೆ ರಕ್ಷಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಒಬ್ಬ ಭಾರತೀಯ ಪ್ರಜೆ ಸೇನೆಯ ಬಟ್ಟೆ ತೊಟ್ಟಾಗ ಅದರ ಜವಾಬ್ದಾರಿ ಪೂರೈಸಲು ಸಿದ್ಧನಾಗಿರುತ್ತಾನೆ. ಧೋನಿ ಬೇಸಿಕ್ ಟ್ರೇನಿಂಗ್ ಪಡೆದಿದ್ದಾರೆ. ಈ ತರಬೇತಿ ಪಡೆದುಕೊಳ್ಳುವ ಸಾಮರ್ಥ್ಯ ಅವರಲ್ಲಿದೆ' ಎಂದು ಬಿಪಿಎನ್ ರಾವತ್ ತಿಳಿಸಿದ್ದರು.
ಪ್ಯಾರಾಚೂಟ್ ರೆಜಿಮೆಂಟ್‌ನ 106 ಪ್ಯಾರಾ ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ತರಬೇತಿ ಪಡೆದುಕೊಂಡರು. ಈ ಸೇನಾ ಟ್ರೇನಿಂಗ್ ವೇಳೆ ಧೋನಿ ಸಾಮಾನ್ಯ ಸೈನಿಕರಂತೆ ಗಸ್ತು, ಕಾವಲು ಮತ್ತು ಪೋಸ್ಟ್ ಡ್ಯೂಟಿಯನ್ನು ಮಾಡಿದ್ದರು. ಆದರೆ, ನಿನ್ನೆ ನಡೆದ ದುರ್ಘಟನೆಯಲ್ಲಿ ಜನರಲ್ ರಾವತ್ ಅವರಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಕುನ್ನೂರಿನ ಅರಣ್ಯದಲ್ಲಿ ಪತನಗೊಂಡಿದೆ. ಈ ಅಪಘಾತದ ನಂತರ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತಿಕೊಂಡಿತು. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಅಪಘಾತದಲ್ಲಿ ಸಾವಿಗೀಡಾದರು.