ಕೃಷಿ ಕಾಯ್ದೆ ರದ್ದು: ಪ್ರತಿಭಟನೆ ಹಿಂಪಡೆದ ರೈತರು, ಡಿಸೆಂಬರ್ 11 ರಂದು ದೆಹಲಿ ಗಡಿಯಿಂದ ನಿರ್ಗಮನ
ತಮ್ಮ ಬೇಡಿಕೆಯಂತೆ ಪರಿಷ್ಕೃತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಗುರುವಾರ ಹಸ್ತಾಂತರಿಸಿದ ನಂತರ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುತ್ತಿದೆ
Published: 09th December 2021 03:57 PM | Last Updated: 09th December 2021 03:57 PM | A+A A-

ರೈತರ ಸಂಭ್ರಮ
ನವದೆಹಲಿ: ತಮ್ಮ ಬೇಡಿಕೆಯಂತೆ ಪರಿಷ್ಕೃತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಗುರುವಾರ ಹಸ್ತಾಂತರಿಸಿದ ನಂತರ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಗುತ್ತಿದೆ ಎಂದು ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಘೋಷಿಸಿದೆ.
ಡಿಸೆಂಬರ್ 11ರಂದು, ಶನಿವಾರ ದೆಹಲಿ ಗಡಿಯನ್ನು ಖಾಲಿ ಮಾಡುವುದಾಗಿ ಮತ್ತು ಜನವರಿ 15 ರಂದು ಮತ್ತೊಂದು ಸಭೆ ನಡೆಸುವುದಾಗಿ ರೈತರು ಹೇಳಿದ್ದಾರೆ. ಕೇಂದ್ರದ ಪರಿಷ್ಕೃತ ಪ್ರಸ್ತಾವನೆ ಬಂದ ಕೂಡಲೇ, ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಸುವುದಾಗಿ ತಿಳಿಸಿದೆ.
ಇದನ್ನು ಓದಿ: ರೈತರ ಪ್ರತಿಭಟನೆ ಅಂತ್ಯ?: ಗೃಹ ಸಚಿವ, ಕೃಷಿ ಸಚಿವರನ್ನು ಭೇಟಿಯಾಗಲಿರುವ ಎಸ್ ಕೆಎಂ ಸಮಿತಿ
ಕೃಷಿ ಕಾಯ್ದೆಗಳನ್ನು ಹಿಂಪಡೆದ ನಂತರ ಕೇಂದ್ರ ಸರ್ಕಾರವೂ ತಮ್ಮ ಮುಂದೆ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಅದನ್ನು ರೈತರು ಒಪ್ಪಿಕೊಂಡಿದ್ದಾರೆ. ಅವರ ಬೇಡಿಕೆಯನ್ನು ಆಧರಿಸಿ ಕೇಂದ್ರವು ಲಿಖಿತ ಭರವಸೆ ನೀಡಿದೆ.
ಇದನ್ನು ಓದಿ: ಸಂಸತ್ತಿನ ಎರಡೂ ಸದನಗಳಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆ ಅಂಗೀಕಾರ
ನವೆಂಬರ್ 21 ರಂದು ಎಸ್‌ಕೆಎಂ ಆರು ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ನಂತರ ಕೇಂದ್ರವು ಬುಧವಾರ ಎಸ್‌ಕೆಎಂನ ಐದು ಸದಸ್ಯರ ಸಮಿತಿಗೆ ಲಿಖಿತ ಕರಡು ಪ್ರಸ್ತಾವನೆಯನ್ನು ಕಳುಹಿಸಿದೆ. ವಿವಾದಾತ್ಮಕ ಕಾನೂನುಗಳನ್ನು ರದ್ದುಗೊಳಿಸುವುದು ರೈತರ ಪ್ರಮುಖ ಬೇಡಿಕೆಯಾಗಿತ್ತು. ಪ್ರಧಾನಿ ಮೋದಿ ಅವರು ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ನಂತರ ಮತ್ತು ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ದರೂ ರೈತರು ಪ್ರತಿಭಟನೆ ನಿಲ್ಲಿಸಿರಲಿಲ್ಲ. ಬೆಂಬಲ ಬೆಲೆಗೆ ಖಾತರಿ ನೀಡಬೇಕು ಎಂಬ ಬೇಡಿಕೆ ಸೇರಿದಂತೆ ಬಾಕಿ ಇರುವ ಸಮಸ್ಯೆಗಳನ್ನು ಚರ್ಚಿಸಲು ಕಳೆದ ವಾರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ (ಫೋನ್ ಕರೆ ಮೂಲಕ) ಮಾತನಾಡಿರುವುದಾಗಿ ಎಂದು ರೈತರು ಹೇಳಿದ್ದರು.
ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ(MSP) ಖಾತರಿ ಸೇರಿದಂತೆ ಪ್ರತಿಭಟನಾ ನಿರತ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಲಿಖಿತ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಗಿದ್ದು, ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಟೆಂಟ್ ತೆಗೆಯಲು ಆರಂಭಿಸಿದ್ದಾರೆ. ಅಲ್ಲದೆ ಸಿಹಿ ವಿನಿಮಯ ಮಾಡಿಕೊಳ್ಳುವ ದೃಶ್ಯ ಸಹ ಕಂಡು ಬರುತ್ತಿದೆ.