ಪನಾಮಾ ಪೇಪರ್ಸ್ ಲೀಕ್ ಪ್ರಕರಣ: ಇಡಿಯಿಂದ ಸತತ ಐದು ಗಂಟೆಗಳ ಕಾಲ ಐಶ್ವರ್ಯಾ ರೈ ವಿಚಾರಣೆ
ದೆಹಲಿ: ಪನಾಮಾ ಪೇಪರ್ಸ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರನ್ನು ಸತತ ಐದು ಗಂಟೆಗಳ ಕಾಲ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ವಿಚಾರಣೆ ನಡೆಸಿದರು. ಸೋಮವಾರ ಸಂಜೆ ಅವರು ಇಂಡಿಯಾ ಗೇಟ್ ಬಳಿಯಿರುವ ಇಡಿ ಕಚೇರಿಯಿಂದ ನಿರ್ಗಮಿಸಿದರು.
ಆದಾಗ್ಯೂ, ಮತ್ತೆ ಐಶ್ವರ್ಯಾ ರೈ ಅವರಿಗೆ ಸಮನ್ಸ್ ನೀಡಲಾಗುತ್ತದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ಯಾವುದೇ ಸ್ಪಷ್ಟ ಹೇಳಿಕೆ ನೀಡಿಲ್ಲ. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಮೂಲದ ಕಂಪನಿಯೊಂದರಲ್ಲಿ ಇರುವ ತನ್ನ ಹಣದ ಬಗ್ಗೆ ಆಕೆ ಹೇಳಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಒಬ್ಬರು ಮಹಿಳಾ ಅಧಿಕಾರಿ ಸೇರಿದಂತೆ ಆರು ಅಧಿಕಾರಿಗಳ ತಂಡ ಐಶ್ವರ್ಯ ರೈ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಅವರ ಮಾವ ಅಮಿತಾಭ್ ಬಚ್ಚನ್ ಅವರ ಸಂಸ್ಥೆಗೆ ಸಂಬಂಧಿಸಿದಂತೆ 50 ಪ್ರಶ್ನೆಗಳನ್ನು ಐಶ್ವರ್ಯ ಅವರಿಗೆ ಕೇಳಿರುವುದಾಗಿ ಮೂಲಗಳು ತಿಳಿಸಿವೆ. ಅವರು ಆ ಸಂಸ್ಥೆಯ ಮೊದಲ ನಿರ್ದೇಶಕರಾಗಿದ್ದರು. ತದನಂತರ ಷೇರು ಪಾಲುದಾರರಾಗಿದ್ದಾರೆ.
ಇದು ಮೂರನೇ ಬಾರಿಗೆ ಐಶ್ವರ್ಯಾ ರೈಗೆ ನೀಡಿದ ಸಮನ್ಸ್ ಆಗಿದೆ. ಆದಾಗ್ಯೂ, ಈ ಹಿಂದೆ ನಡೆದ ತನಿಖೆಗೆ ಆಕೆ ಸೇರಿರಲಿಲ್ಲ. ಡಿಸೆಂಬರ್ 20 ರಂದು ಆಕೆಗೆ ಸಮನ್ಸ್ ನೀಡಲಾಗಿತ್ತು. ಮೂರನೇ ಸಮನ್ಸ್ ನಿಂದ ಆಕೆ ತನಿಖೆಗೆ ಹಾಜರಾಗಿದ್ದಾಗಿ ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಮಾ ಕಾಯ್ದೆಯ ವಿನಾಯಿತಿ ಅಡಿಯಲ್ಲಿ 48 ವರ್ಷದ ನಟಿಯ ವಿಚಾರಣೆ ನಡೆಸಲಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿದೆ. ವಿಚಾರಣೆಗೆ ಇಡಿ ಮುಂದೆ ಹಾಜರಾದಾಗ ಆಕೆ ಕೂಡಾ ಕೆಲವೊಂದು ದಾಖಲೆಗಳನ್ನು ಸಲ್ಲಿಸಿದ್ದಾರೆ. ಆಕೆಯ ಕುಟುಂಬದ ಅಕ್ರಮ ಆಸ್ತಿ ಸಂಪಾದನೆ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಇಡಿ ವಿಚಾರಣೆ ನಡೆಸಿರುವುದಾಗಿ ಮೂಲಗಳು ಹೇಳಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ