ಕೋವಿಡ್-19 ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ ಜಾಗರೂಕರಾಗಿರಿ: ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ

ದೇಶಾದ್ಯಂತ ಕೋವಿಡ್-19 ನ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಡಿ.23 ರಂದು ಉನ್ನತ ಮಟ್ಟದ ಸಭೆ ನಡೆಸಿದ್ದು ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದೇಶಾದ್ಯಂತ ಕೋವಿಡ್-19 ನ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಡಿ.23 ರಂದು ಉನ್ನತ ಮಟ್ಟದ ಸಭೆ ನಡೆಸಿದ್ದು ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. 

ಸಭೆಯಲ್ಲಿ ಕೋವಿಡ್-19 ತಡೆಗೆ ಸೂಕ್ತವಾದ ನಡೆಗೆ ಹೆಚ್ಚಿನ ಒತ್ತನ್ನು ಪ್ರಧಾನಿ ಮೋದಿ ನೀಡಿದ್ದು, ಕೊರೋನಾ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ ಎಂದು ಹೇಳಿದ್ದು, ಕಡಿಮೆ ಲಸಿಕೆ ಪ್ರಮಾಣವಿರುವ ರಾಜ್ಯಗಳಿಗೆ, ಪ್ರಕರಣ ಹೆಚ್ಚುತ್ತಿರುವ ಪ್ರದೇಶಗಳಿಗೆ ಹಾಗೂ ಕಡಿಮೆ ಆರೋಗ್ಯ ಮೂಲಸೌಕರ್ಯವಿರುವೆಡೆಗೆ ಸಹಾಯ ಮಾಡುವುದಕ್ಕಾಗಿ ಪರಿಸ್ಥಿತಿ ಸುಧಾರಣೆ ಮಾಡುವುದಕ್ಕಾಗಿ ತಂಡಗಳನ್ನು ಕಳಿಸಬೇಕೆಂದು ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಓಮಿಕ್ರಾನ್ ಹಿನ್ನೆಲೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು (ಸತರ್ಕ್, ಸಾವಧಾನ್ ಪಾಲನೆ) ಎಂದೂ ಮೋದಿ ಸೂಚನೆ ನೀಡಿದ್ದಾರೆ. 

ಕೋವಿಡ್-19 ಹಾಗೂ ಓಮಿಕ್ರಾನ್ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡುವಂತೆಯೂ ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಕೋವಿಡ್-19 ತಡೆಗೆ ಸುರಕ್ಷಿತ ನಡೆಯನ್ನು ಮುಂದುವರೆಸಬೇಕಿರುವುದು ಇಂದಿಗೂ ಅತ್ಯಂತ ಪ್ರಮುಖವಾದದ್ದು ಎಂದು ಹೇಳಿದ್ದಾರೆ. 

ಕಂಟೈನ್ಮೆಂಟ್ ಹಾಗೂ ಕೋವಿಡ್-19 ನಿರ್ವಹಣೆ, ಆಕ್ಸಿಜನ್ ಲಭ್ಯತೆ, ಔಷಧ ಲಭ್ಯತೆ, ಕಾನ್ಸಂಟ್ರೇಟರ್ ಗಳು, ವೆಂಟಿಲೇತರ್, ಪಿಎಸ್ಎ ಘಟಕ, ಐಸಿಯು/ ಆಕ್ಸಿಜನ್ ಬೆಂಬಲಿತ ಬೆಡ್ ಗಳು, ಮಾನವ ಸಂಪನ್ಮೂಲ, ಐಟಿ ಸಹಯೋಗ, ಲಸಿಕೆ ಸ್ಥಿತಿಗಳು ಸೇರಿದಂತೆ ಆರೋಗ್ಯ ಸಂಬಂಧಿತ ವಿಷಯಗಳ ಪರಿಶೀಲನೆ, ಆರೋಗ್ಯ ಮೂಲಸೌಕರ್ಯಗಳ ಬಲವರ್ಧನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಪಿಎಂಒ ಮಾಹಿತಿ ನೀಡಿದೆ. 

ಅಧಿಕಾರಿಗಳು ಸಭೆಯಲ್ಲಿ ಓಮಿಕ್ರಾನ್ ಸಂಬಂಧಿತ ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ಪ್ರಧಾನಿಗಳಿಗೆ ವಿವರಿಸಿದ್ದು, ಯಾವ ದೇಶದಲ್ಲಿ ಸೋಂಕು ಹೆಚ್ಚಿದೆ, ಲಸಿಕೆ ನೀಡಿರುವ ಪ್ರಮಾಣ, ಹೊಸ ಸೋಂಕು ಇರುವಿಕೆ, ಡಬ್ಲ್ಯುಹೆಚ್ ಒ ನಿಂದ ಶಿಫಾರಸು ಮಾಡಲಾಗಿರುವ ಆದ್ಯತೆಯ ಕ್ರಮಗಳು  ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com