ತೆರಿಗೆ ವಂಚನೆ ಪ್ರಕರಣ: ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಬಂಧನ
ತೆರಿಗೆ ವಂಚನೆ ಆರೋಪದ ಮೇಲೆ ಕೇಂದ್ರೀಯ ಸಂಸ್ಥೆಗಳು ಕಾನ್ಪುರ ಮೂಲದ ಉದ್ಯಮಿ ಪಿಯೂಷ್ ಜೈನ್ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
Published: 27th December 2021 08:52 PM | Last Updated: 27th December 2021 08:52 PM | A+A A-

ಐಟಿ ದಾಳಿ ವೇಳೆ ಪತ್ತೆಯಾದ ನಗದು
ಕಾನ್ಪುರ: ತೆರಿಗೆ ವಂಚನೆ ಆರೋಪದ ಮೇಲೆ ಕೇಂದ್ರೀಯ ಸಂಸ್ಥೆಗಳು ಕಾನ್ಪುರ ಮೂಲದ ಉದ್ಯಮಿ ಪಿಯೂಷ್ ಜೈನ್ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಮುಂದಿನ ಕ್ರಮಕ್ಕಾಗಿ ಸುಗಂಧ ದ್ರವ್ಯ ಉದ್ಯಮಿಯನ್ನು ಕಾನ್ಪುರದಿಂದ ಅಹಮದಾಬಾದ್‌ಗೆ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಉತ್ತರ ಪ್ರದೇಶ: ಉದ್ಯಮಿ ಮನೆ, ಅಂಗಡಿ ಮೇಲೆ ಐಟಿ ದಾಳಿ, ಬರೋಬ್ಬರಿ 150 ಕೋಟಿ ರೂ. ನಗದು ವಶ
ತೆರಿಗೆ ವಂಚನೆ ಆರೋಪದ ಮೇಲೆ ಪಿಯೂಷ್ ಜೈನ್ ಅವರನ್ನು ಬಂಧಿಸಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆಯ ಜಂಟಿ ಆಯುಕ್ತ(ಕಾನ್ಪುರ) ಸುರೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.
ಕಳೆದ ವಾರ ಜೈನ್ ಒಡೆತನದ ಕಂಪನಿ, ಕಚೇರಿ ಮತ್ತು ಮನೆ ಮೇಲೆ ಸರಣಿ ದಾಳಿ ನಡೆಸಿದ ಅಧಿಕಾರಿಗಳು ನಗದು ಸೇರಿದಂತೆ 257 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ಇನ್‌ವಾಯ್ಸ್‌ಗಳ ಮೂಲಕ ಮತ್ತು ಇ-ವೇ ಬಿಲ್‌ಗಳಿಲ್ಲದೆ ಸರಕು ಸಾಗಣೆದಾರರಿಂದ ಸರಕುಗಳ ರವಾನೆಗೆ ಹಣವನ್ನು ಲಿಂಕ್ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಾಲ್ಕನೇ ದಿನವೂ ದಾಳಿ ಮುಂದುವರೆದಿದ್ದು, ದಾಳಿ ಮುಗಿಯುವ ಹೊತ್ತಿಗೆ ಇನ್ನಷ್ಟು ಹೆಚ್ಚಿನ ನಗದು ಪತ್ತೆಯಾಗುವ ಸಾಧ್ಯತೆ ಇದೆ. ಜಿಎಸ್ಟಿಯ ಉತ್ತರ ಪ್ರದೇಶ, ಗುಜರಾತ್ ಘಟಕಗಳ ಅಧಿಕಾರಿಗಳು ಸೇರಿ ಪಿಯುಷ್ ಜೈನ್ ಮನೆ ಮತ್ತು ಆತನಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. 40 ತಾಸುಗಳಿಂದಲೂ ಪಿಯುಷ್ಗೆ ಸಂಬಂಧಪಟ್ಟ ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಹಣ ಎಣಿಕೆ ಕಾರ್ಯ ನಡೆಯುತ್ತಲೇ ಇದೆ. ಮನೆಗಳಲ್ಲಿರುವ ಕೆಲವು ಕೋಣೆಗಳ ಬಾಗಿಲನ್ನು ತೆಗೆಯಲು ಬಾರದ ಕಾರಣ ಬೀಗ ತೆಗೆಯುವವರನ್ನೂ ಕರೆಸಲಾಗಿದೆ.