ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆಯಲು ಡಾಕ್ಟರ್ ಸರ್ಟಿಫಿಕೇಟ್ ಬೇಕಿಲ್ಲ: ಕೇಂದ್ರ ಸರ್ಕಾರ

60 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಬೂಸ್ಟರ್ ಡೋಸ್ ಪಡೆಯುವಾಗ ವೈದ್ಯರಿಂದ ಯಾವುದೇ ಪ್ರಮಾಣ ಪತ್ರ ತೋರಿಸುವ ಅಗತ್ಯವಿಲ್ಲ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 60 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಬೂಸ್ಟರ್ ಡೋಸ್ ಪಡೆಯುವಾಗ ವೈದ್ಯರಿಂದ ಯಾವುದೇ ಪ್ರಮಾಣ ಪತ್ರ ತೋರಿಸುವ ಅಗತ್ಯವಿಲ್ಲ ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. 

ಈ ಸಂಬಂಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಎರಡನೇ ಡೋಸ್ ಪಡೆದ ದಿನದಿಂದ 39 ವಾರಗಳು ಅಥವಾ 9 ತಿಂಗಳು ಪೂರ್ಣಗೊಂಡ  ಬಗ್ಗೆ ಕೋ- ವಿನ್ ಪೋರ್ಟಲ್ ನಲ್ಲಿನ ದಾಖಲೆ ಆಧಾರದ ಮೇಲೆ ಅರ್ಹ ಇಂತಹ ಫಲಾನುಭವಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ. 

ಬೂಸ್ಟರ್ ಡೋಸ್ ಪಡೆಯಲು ಅರ್ಹರಾದ ಎಲ್ಲಾ ಫಲಾನುಭವಿಗಳಿಗೆ ಕೋವಿನ್ ಸಂದೇಶ ಕಳುಹಿಸಲಿದೆ. ಅದು ಡಿಜಿಟಲ್ ವ್ಯಾಕ್ಸಿನೇಷನ್ ಪ್ರಮಾಣ ಪತ್ರದಲ್ಲಿ ಪ್ರತಿಬಿಂಬಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ರಾಜೇಶ್ ಭೂಷಣ್ ನೇತೃತ್ವದಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಇಂದು ನಡೆದ ವಿಡಿಯೋ ಕಾನ್ಫರೆನ್ಸ್  ನಲ್ಲಿ 15 -18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಲಸಿಕೆ ಮತ್ತು ಆರೋಗ್ಯ, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕೂ ಮೇಲ್ಪಟ್ಟ ಇತರೆ ಅನಾರೋಗ್ಯ ಸಮಸ್ಯೆಗೊಳಗಾದವರಿಗೆ ಬೂಸ್ಟರ್ ಡೋಸ್ ನೀಡಿಕೆ ಕುರಿತಂತೆ ಪರಾಮರ್ಶೆ ನಡೆಸಲಾಯಿತು.

ಸದ್ಯ 15-18 ವರ್ಷದ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ಮಾತ್ರ ಇದೆ.  ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಲಸಿಕೆ ಕಳುಹಿಸಲಾಗುವುದು, ಮುಂದಿನ ಕೆಲದಿನಗಳಲ್ಲಿ ಲಸಿಕೆ ಕಳುಹಿಸುವ ದಿನಾಂಕಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗವುದು ಎಂದು ರಾಜೇಶ್ ಭೂಷಣ್ ತಿಳಿಸಿದರು. 

ಜನವರಿ 3 ರಿಂದ ಮಕ್ಕಳಿಗೆ ಲಸಿಕೆ ನೀಡಿಕೆ ಆರಂಭವಾಗಲಿದ್ದು, ಫಲಾನುಭವಿಗಳು ಜನವರಿ 1 ರಿಂದ ಕೋವಿನ್ ಪೋರ್ಟಲ್ ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. 2007ಕ್ಕಿಂತ ಹಿಂದೆ ಜನಿಸಿದವರು ಈ ಹಂತದಲ್ಲಿ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಎಂದು ಅವರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com