ಪತಂಜಲಿಯ ಕೊರೋನಿಲ್ ಬಗ್ಗೆ ಐಎಂಎಗೆ 'ಆಘಾತ', ಕೇಂದ್ರ ಆರೋಗ್ಯ ಸಚಿವರಿಂದ ವಿವರಣೆ ಕೇಳಿದ ವೈದ್ಯಕೀಯ ಸಂಘ
ಪತಂಜಲಿಯ ಕೊರೋನಿಲ್ ಆಯುರ್ವೇದ ಮಾತ್ರೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮನ್ನಣೆ ದೊರೆತಿದೆ ಎಂದು ಯೋಗಗುರು ಬಾಬಾ ರಾಮ್‌ದೇವ್ ಅವರು ಸುಳ್ಳು ಹೇಳಿರುವ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಭಾರತೀಯ...
Published: 22nd February 2021 03:55 PM | Last Updated: 22nd February 2021 03:55 PM | A+A A-

ಕೊರೋನಿಲ್ ಬಿಡುಗಡೆ
ನವದೆಹಲಿ: ಪತಂಜಲಿಯ ಕೊರೋನಿಲ್ ಆಯುರ್ವೇದ ಮಾತ್ರೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮನ್ನಣೆ ದೊರೆತಿದೆ ಎಂದು ಯೋಗಗುರು ಬಾಬಾ ರಾಮ್‌ದೇವ್ ಅವರು ಸುಳ್ಳು ಹೇಳಿರುವ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ಭಾರತೀಯ ವೈದ್ಯಕೀಯ ಸಂಘ(ಐಎಂಎ), ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ವಿವರಣೆ ನೀಡಬೇಕು ಎಂದು ಒತ್ತಾಯಿಸಿದೆ.
ಕೇಂದ್ರ ಆರೋಗ್ಯ ಸಚಿವರ ಉಪಸ್ಥಿತಿಯಲ್ಲೇ ಬಿಡುಗಡೆ ಮಾಡಲಾದ ಪತಂಜಲಿಯ ಕೊರೋನಿಲ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದ್ದು, ‘ಕೊರೋನಾ ವೈರಸ್ ವಿರುದ್ಧ ಯಾವುದೇ ಸಾಂಪ್ರದಾಯಿಕ ಔಷಧವನ್ನು ನಾವು ಪರಿಶೀಲನೆ ನಡೆಸಿಲ್ಲ. ಈ ರೀತಿಯ ಯಾವುದೇ ಔಷಧಗಳಿಗೆ ಮಾನ್ಯತೆಯನ್ನು ನೀಡಿಲ್ಲ’ ಎಂದು ಹೇಳಿದೆ.
ಇದರ ಬೆನ್ನಲೇ ಪ್ರಕಟಣೆ ನೀಡಿರುವ ಐಎಂಎ, "ದೇಶದ ಆರೋಗ್ಯ ಸಚಿವರಾಗಿ ಇಂತಹ ಸುಳ್ಳು ಕಟ್ಟುಕಥೆಯ ಅವೈಜ್ಞಾನಿಕ ಉತ್ಪನ್ನವನ್ನು ಇಡೀ ದೇಶದ ಜನರಿಗೆ ಬಿಡುಗಡೆ ಮಾಡುವುದು ಎಷ್ಟು ಸಮರ್ಥನೀಯ? ಎಂದು ಪ್ರಶ್ನಿಸಿದೆ. ಅಲ್ಲದೆ ಈ ಬಗ್ಗೆ ಆರೋಗ್ಯ ಸಚಿವರು ದೇಶಕ್ಕೆ ವಿವರಣೆ ನೀಡುವ ಅಗತ್ಯವಿದೆ ಎಂದು ಹೇಳಿದೆ.
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನೀತಿ ಸಂಹಿತೆ ಉಲ್ಲಂಘಿಸಿ, ಅಗೌರವ ತೋರಿದ ಪತಂಜಲಿ ವಿರುದ್ಧ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಪತ್ರ ಬರೆಯುವುದಾಗಿ ಐಎಂಎ ತಿಳಿಸಿದೆ.
ಕಳೆದ ಫೆಬ್ರವರಿ 19ರಂದು ಕೊರೋನಿಲ್ ಬಿಡುಗಡೆ ಮಾಡಿದ್ದ ಬಾಬಾ ರಾಮ್ ದೇವ್ ಅವರು, ‘ಪತಂಜಲಿಯ ಕೊರೋನಿಲ್ ಆಯುರ್ವೇದ ಮಾತ್ರೆಗಳಿಗೆ ಭಾರತ ಸರ್ಕಾರದಿಂದ ಮಾನ್ಯತೆ ದೊರೆತಿದೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಮಾನ್ಯತೆ ಪಡೆದುಕೊಂಡಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೊರೋನಿಲ್ ಮಾತ್ರೆಗಳು ಅತ್ಯಂತ ಪರಿಣಾಮಕಾರಿಯಾಗಿವೆ’ ಎಂದು ಹೇಳಿಕೊಂಡಿದ್ದರು. ಈ ಕುರಿತಾದ ವೈಜ್ಞಾನಿಕ ಪುರವೆಯನ್ನು ರಾಮ್ ದೇವ್ ಬಿಡುಗಡೆ ಮಾಡಿದ್ದರು.