ಜುಲೈ 8ಕ್ಕೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಸಾಧ್ಯತೆ
ಜುಲೈ 8ಕ್ಕೆ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಯಿರುವುದಾಗಿ ಮೂಲಗಳು ಮಂಗಳವಾರ ತಿಳಿಸಿವೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಡುವಣ ಸರಣಿ ಸಭೆ ಬಳಿಕ ಸ್ವಲ್ಪ ಸಮಯದಿಂದ ನಡೆಯುತ್ತಿದ್ದ ಕುತೂಹಲ ಮತ್ತಷ್ಟು ತೀವ್ರಗೊಂಡಿದೆ.
Published: 06th July 2021 04:05 PM | Last Updated: 06th July 2021 09:58 PM | A+A A-

ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಜುಲೈ 8ಕ್ಕೆ ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗುವ ಸಾಧ್ಯತೆಯಿರುವುದಾಗಿ ಮೂಲಗಳು ಮಂಗಳವಾರ ತಿಳಿಸಿವೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಡುವಣ ಸರಣಿ ಸಭೆ ಬಳಿಕ ಸ್ವಲ್ಪ ಸಮಯದಿಂದ ನಡೆಯುತ್ತಿದ್ದ ಕುತೂಹಲ ಮತ್ತಷ್ಟು ತೀವ್ರಗೊಂಡಿದೆ. ಜೆ ಪಿ ನಡ್ಡಾ ಸುಮಾರು ಒಂದು ತಿಂಗಳಿನಿಂದ ಆಗಾಗ್ಗೆ ಪ್ರಧಾನಿ ನಿವಾಸಕ್ಕೆ ಭೇಟಿ ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಬಿಹಾರದಿಂದ ನಾಲ್ವರು ಮಂತ್ರಿಗಳನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಈ ಪೈಕಿ ಎರಡು ಜೆಡಿಯು, ಒಂದು ಎಲ್ ಜೆಪಿ (ಪಶುಪತಿ ಪರಾಸ್ ಗ್ರೂಪ್ ) ಮತ್ತೊಂದು ಬಿಜೆಪಿಗೆ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಬಿಜೆಪಿ ತನ್ನ ಪ್ರಮುಖ ನಾಯಕರು ಮತ್ತು ಎನ್ ಡಿಎ ಮೈತ್ರಿ ಸದಸ್ಯರುಗಳಿಗೆ ನರೇಂದ್ರ ಮೋದಿ ಸಂಪುಟದಲ್ಲಿ ಶೀಘ್ರದಲ್ಲಿಯೇ ಸೇರಿಸಿಕೊಳ್ಳುವ ಸಾಧ್ಯತೆಯಿರುವುದಾಗಿ ಆರಂಭಿಕ ಮೂಲಗಳು ಹೇಳುತ್ತಿದ್ದವು. ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ಜ್ಯೋತಿರಾಧಿತ್ಯ ಸಿಂಧಿಯಾ, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತ್ರಿವೇಂದರ್ ಸಿಂಗ್ ರಾವತ್ ಅವರಂತಹ ಅನೇಕ ಮುಖಂಡರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಯಿರುವುದಾಗಿ ಊಹಾಪೋಹಗಳು ಹರಡಿವೆ.
ಶಿವಸೇನಾ ಮತ್ತು ಶಿರೋಮಣಿ ಅಕಾಲಿ ದಳ ಎನ್ ಡಿಎಯಿಂದ ನಿರ್ಗಮನ ಮತ್ತು ರಾಮ್ ವಿಲಾಸ್ ಪಾಸ್ವನ್ ಅವರ ನಿಧನದಿಂದ ಅನೇಕ ಸ್ಥಾನಗಳು ಸಂಪುಟದಲ್ಲಿ ಖಾಲಿಯಾಗಿವೆ. ಮುಂದೆ ಪಕ್ಷ ವಿಸ್ತರಣೆ ದೃಷ್ಟಿಯಿಂದ ಮಧ್ಯಪ್ರದೇಶ ಮತ್ತು ಆಂಧ್ರ ಪ್ರದೇಶದಂತಹ ಅನೇಕ ಪ್ರಮುಖ ರಾಜ್ಯಗಳ ಮುಖಂಡರಿಗೆ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆಯಿರುವುದಾಗಿ ಪಕ್ಷದ ಮೂಲಗಳು ಈ ಹಿಂದೆ ಹೇಳಿದ್ದವು.