ಶಬ್ದ ಮಾಲಿನ್ಯ ನಿಯಮ ಉಲ್ಲಂಘನೆಗೆ ನವದೆಹಲಿಯಲ್ಲಿ ಭಾರೀ ದಂಡ! 

ರಾಷ್ಟ್ರ ರಾಜಧಾನಿ ನವದೆಹಲಿಯ ಜನರು ಅನುಮತಿ ಇಲ್ಲದೆ ಧ್ವನಿವರ್ಧಕ ಅಥವಾ ಡಿಜಿ ಸೆಟ್‌ಗಳನ್ನು ಬಳಸುವುದರ ಮೂಲಕ ಶಬ್ದ ಮಾಲಿನ್ಯದ ನಿಯಮಗಳನ್ನು ಉಲ್ಲಂಘಿಸಿದ್ದರೆ 10 ಸಾವಿರದಿಂದ 1 ಲಕ್ಷದವರೆಗೂ ದಂಡ ಪಾವತಿಸಬೇಕಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಜನರು ಅನುಮತಿ ಇಲ್ಲದೆ ಧ್ವನಿವರ್ಧಕ ಅಥವಾ ಡಿಜಿ ಸೆಟ್‌ಗಳನ್ನು ಬಳಸುವುದರ ಮೂಲಕ ಶಬ್ದ ಮಾಲಿನ್ಯದ ನಿಯಮಗಳನ್ನು ಉಲ್ಲಂಘಿಸಿದ್ದರೆ 10 ಸಾವಿರದಿಂದ 1 ಲಕ್ಷದವರೆಗೂ ದಂಡ ಪಾವತಿಸಬೇಕಾಗುತ್ತದೆ. ಪರಿಷ್ಕೃತ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ, ಸಂಬಂಧಿತ ಆಡಳಿತ ಸಂಸ್ಥೆಗೆ ಸೂಚಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಷ್ಕೃತ ದಂಡಗಳ ಪ್ರಕಾರ, ಲೌಡ್ ಸ್ಪೀಕರ್ ನಿಂದ ಅಥವಾ ಅನುಮತಿ ಇಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಶಬ್ದ ಮಾಲಿನ್ಯ ನಿಯಮ ಉಲ್ಲಂಘಿಸಿದರೆ 10 ಸಾವಿರ ದಂಡವನ್ನು ವಿಧಿಸಲಾಗುವುದು ಅಲ್ಲದೇ, ಉಪಕರಣಗಳನ್ನು ಕೂಡಾ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

1 ಸಾವಿರ ಕೆವಿಎ ಶಬ್ದ ಮಾಲಿನ್ಯಕ್ಕಾಗಿ ಡಿಸೆಲ್ ಜನರೆಟರ್ ಸೆಟ್ ಗೆ 1 ಲಕ್ಷ, 62.5 ಕೆವಿಎಯಿಂದ 1 ಸಾವಿರ ಕೆವಿಎ ಡಿಜಿ ಸೆಟ್ ಗೆ 25 ಸಾವಿರ, 62.5 ಕೆವಿಎಯ ಡಿಜೆ ಸೆಟ್ ಗಳಿಗೆ 10 ಸಾವಿರ ರೂ. ದಂಡ ಹಾಕಲಾಗುವುದು ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಆದೇಶದಲ್ಲಿ ತಿಳಿಸಿದೆ.

ಹಗಲು ವೇಳೆಯಲ್ಲಿ ವಸತಿ ಪ್ರದೇಶಗಳಲ್ಲಿ ಶಬ್ದದ ಮಟ್ಟ  55 ಡೆಸಿಬಲ್ ಮತ್ತು ರಾತ್ರಿ ವೇಳೆಯಲ್ಲಿ 45 ಡೆಸಿಬಲ್ ಗೆ ಮಾತ್ರ ಅನುಮತಿ ನೀಡಲಾಗಿದೆ. ವಾಣಿಜ್ಯ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿ 65 ಡೆಸಿಬಲ್ ಮತ್ತು ರಾತ್ರಿ ವೇಳೆ 55 ಡೆಸಿಬಲ್ ಗಳಿಗೆ ಮಾತ್ರ ಮಿತಿಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು ವೇಳೆ 50 ಡೆಸಿಬಲ್ ಮತ್ತು ರಾತ್ರಿ ವೇಳೆ 40 ಡೆಸಿಬಲ್ ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. 

ಇದಲ್ಲದೆ, ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು ಮತ್ತು ನ್ಯಾಯಾಲಯಗಳ ಆವರಣದ 100 ಮೀಟರ್ ವ್ಯಾಪ್ತಿಯಲ್ಲಿರುವ ಪ್ರದೇಶಗಳು ಸೈಲೆಂಟ್ ವಲಯಗಳಾಗಿರುತ್ತವೆ. ಮದುವೆ ಕಾರ್ಯಕ್ರಮ ನಡೆಯುವ ಆವರಣದಲ್ಲಿ ಪಟಾಕಿ ಸಿಡಿಸಿದರೆ ಆಯೋಜಕರು ಮತ್ತು ಆವರಣದ ಮಾಲೀಕರು ಮೊದಲ ಬಾರಿ ಉಲ್ಲಂಘನೆಗೆ 20 ಸಾವಿರ, ಎರಡನೇ ಉಲ್ಲಂಘನೆಗೆ 40 ಸಾವಿರ, ಎರಡಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದರೆ 1 ಲಕ್ಷ ಹಾಗೂ ಆವರಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಆದೇಶದಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com