ಸೆರಂ ಇನ್ ಸ್ಟಿಟ್ಯೂಟ್ ನಿಂದ ಸೆಪ್ಟೆಂಬರ್‌ನಿಂದ ಸ್ಪುಟ್ನಿಕ್‌ ವಿ ಕೋವಿಡ್ ಲಸಿಕೆ ತಯಾರಿಕೆ: ವರದಿ

ಮುಂಬರುವ ಸೆಪ್ಟೆಂಬರ್‌ ತಿಂಗಳಿನಿಂದ ರಷ್ಯಾದ ಸ್ಪುಟ್ನಿಕ್‌ ವಿ ಕೋವಿಡ್ ಲಸಿಕೆ ತಯಾರಿಕೆ ಆರಂಭಿಸಲಾಗುತ್ತದೆ ಎಂದು ಸೆರಂ ಇನ್ ಸ್ಟಿಟ್ಯೂಟ್ ಮಾಹಿತಿ ನೀಡಿದೆ.
ಸ್ಪುಟ್ನಿಕ್ ವಿ ಲಸಿಕೆ
ಸ್ಪುಟ್ನಿಕ್ ವಿ ಲಸಿಕೆ

ನವದೆಹಲಿ: ಮುಂಬರುವ ಸೆಪ್ಟೆಂಬರ್‌ ತಿಂಗಳಿನಿಂದ ರಷ್ಯಾದ ಸ್ಪುಟ್ನಿಕ್‌ ವಿ ಕೋವಿಡ್ ಲಸಿಕೆ ತಯಾರಿಕೆ ಆರಂಭಿಸಲಾಗುತ್ತದೆ ಎಂದು ಸೆರಂ ಇನ್ ಸ್ಟಿಟ್ಯೂಟ್ ಮಾಹಿತಿ ನೀಡಿದೆ.

ಈ ಕುರಿತಂತೆ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಮಾಹಿತಿ ನೀಡಿದ್ದು, 'ಭಾರತದಲ್ಲಿ ಸ್ಫುಟ್ನಿಕ್‌-ವಿ ಲಸಿಕೆಯ ತಯಾರಿಕೆಯನ್ನು ಸೆಪ್ಟೆಂಬರ್‌ನಿಂದ ಆರಂಭಿಸುವುದಾಗಿ ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಎಂದು ಹೇಳಿದೆ. 

ಭಾರತದಲ್ಲಿ ಪ್ರತಿ ವರ್ಷ ಲಸಿಕೆಯ 30 ಕೋಟಿಗೂ ಹೆಚ್ಚು ಡೋಸ್‌ಗಳನ್ನು ತಯಾರಿಸುವ ಯೋಜನೆ ಇದ್ದು, ಮೊದಲ ಬ್ಯಾಚ್‌ನಲ್ಲಿ ತಯಾರಿಸುವ ಲಸಿಕೆಯನ್ನು ಭಾರತದ ಅಗತ್ಯಕ್ಕೆ ತೆಗೆದಿರಿಸಲಾಗುವುದು ಎಂದು ಆರ್‌ಡಿಐಎಫ್‌ನ ಸಿಇಒ ಕಿರಿಲ್‌ ಡಿಮಿಟ್ರಿವ್ ಭರವಸೆ ನೀಡಿದ್ದಾರೆ.

ಭಾರತದ ಅಗತ್ಯವನ್ನು ಪೂರೈಸಿದ ಮೇಲೆ ತೃತೀಯ ರಾಷ್ಟ್ರಗಳಿಗೆ ಒಂದಿಷ್ಟು ಡೋಸ್‌ ರಫ್ತು ಮಾಡುವ ಸಾಧ್ಯತೆ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆದಿರುವುದಾಗಿ ಅವರು ಹೇಳಿದ್ದು, ಮುಂಬರುವ ತಿಂಗಳಲ್ಲಿ ಸ್ಫುಟ್ನಿಕ್‌ ವಿ ಲಸಿಕೆಯ ತಯಾರಿಕೆ ಆರಂಭ ಆಗಲಿದ್ದು, ಪ್ರಾಯೋಗಿಕ ಲಸಿಕೆ ಸೆಪ್ಟೆಂಬರ್‌ನಲ್ಲಿ  ಲಭ್ಯವಾಗಲಿದೆ ಎಂದು ಸೀರಂನ ಸಿಇಒ ಅದಾರ್‌ ಪೂನಾವಾಲಾ ತಿಳಿಸಿದ್ದಾರೆ.

'ಹೆಚ್ಚಿನ ಪರಿಣಾಮಕಾರಿತ್ವ ಮತ್ತು ಉತ್ತಮ ಸುರಕ್ಷತಾ ಸಾಮರ್ಥ್ಯದೊಂದಿಗೆ, ಭಾರತ ಮತ್ತು ಪ್ರಪಂಚದಾದ್ಯಂತದ ಜನರಿಗೆ ಸ್ಪುಟ್ನಿಕ್ ಲಸಿಕೆ ಪೂರ್ಣ ಪ್ರಮಾಣದಲ್ಲಿ ಪ್ರವೇಶಿಸಬಹುದಾಗಿದೆ. ವೈರಸ್ ನ ಅನಿಶ್ಚಿತತೆಯನ್ನು ಗಮನಿಸಿದರೆ, ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಹೋರಾಟವನ್ನು ಅಂತಾರಾಷ್ಟ್ರೀಯ  ಸಂಸ್ಥೆಗಳು ಮತ್ತು ಸರ್ಕಾರಗಳು ಸಹಕರಿಸುವುದು ಮತ್ತು ಮತ್ತಷ್ಟು ಹೆಚ್ಚಿಸುವುದು ಮುಖ್ಯವಾಗಿದೆ ಎಂದು ಪೂನಾವಾಲ ಹೇಳಿದ್ದಾರೆ.

50 ನಗರಗಳಲ್ಲಿ ‘ಸ್ಪುಟ್ನಿಕ್‌-ವಿ’ ಲಸಿಕಾ ಕಾರ್ಯಕ್ರಮದ ಪ್ರಾಯೋಗಿಕ ಯೋಜನೆ
ಈ ಹಿಂದೆ ಹೈದರಾಬಾದ್‌ ನಲ್ಲಿ ಮೇ 14ರಂದು ಆರಂಭಗೊಂಡ ‘ಸ್ಪುಟ್ನಿಕ್‌-ವಿ’ ಲಸಿಕಾ ಕಾರ್ಯಕ್ರಮದ ಪ್ರಾಯೋಗಿಕ ಯೋಜನೆಯನ್ನು ದೇಶದ 50 ನಗರಗಳಲ್ಲಿ ವಿಸ್ತರಿಸಲಾಗಿದೆ ಎಂದು ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್‌ ಹೇಳಿತ್ತು. ಈ ಕುರಿತು ಟ್ವೀಟ್ ಮಾಡಿದ್ದ ರೆಡ್ಡೀಸ್‌ ಲ್ಯಾಬ್‌, 'ಹೈದರಾಬಾದ್‌ನಲ್ಲಿ  ಆರಂಭಗೊಂಡ ಸ್ಪುಟ್ನಿಕ್‌-ವಿ ಲಸಿಕಾ ಕಾರ್ಯಕ್ರಮವು ಇದೀಗ ದೇಶದ ಹಲವು ನಗರಗಳಿಗೆ ವಿಸ್ತರಿಸಿದೆ. ಹೈದರಾಬಾದ್‌ಗೆ ಸೀಮಿತವಾಗಿರದೇ ವಿಶಾಖಪಟ್ಟಣ, ಬೆಂಗಳೂರು, ಮುಂಬೈ, ನವೀ ಮುಂಬೈ, ಕೋಲ್ಕತ್ತ, ದೆಹಲಿ, ಚೆನ್ನೈ, ವಿಜಯವಾಡ, ಬಡ್ಡಿ, ಕೊಲ್ಹಾಪುರ, ಕೊಚ್ಚಿ, ರಾಯಪುರ, ಚಂಡೀಗಡ, ಪುಣೆ,  ನಾಗಪುರ, ನಾಸಿಕ್‌ ಸೇರಿದಂತೆ ಹಲವು ನಗರಗಳಲ್ಲಿ ಸ್ಪುಟ್ನಿಕ್‌ ವಿ ಲಸಿಕಾ ಕಾರ್ಯಕ್ರಮ ಚಾಲನೆಯಲ್ಲಿದೆ' ಎಂದು ಸಂಸ್ಥೆ ತಿಳಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com