ಸಂಸತ್ತು ಮುಂಗಾರು ಅಧಿವೇಶನ: ಆರಂಭದಲ್ಲೇ ವಿಪಕ್ಷಗಳಿಂದ ತೀವ್ರ ಗದ್ದಲ; ಲೋಕಸಭೆ, ರಾಜ್ಯಸಭೆ ಕಲಾಪ ಮುಂದೂಡಿಕೆ
ಬಹು ನಿರೀಕ್ಷಿತ ಸಂಸತ್ತು ಮುಂಗಾರು ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಆರಂಭದ ಸಮಯದಲ್ಲೇ ವಿರೋಧ ಪಕ್ಷಗಳ ನಾಯಕರು ತೀವ್ರ ಗದ್ದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ಲೋಕಸಭೆ, ರಾಜ್ಯಸಭೆ ಕಲಾಪವನ್ನು ಮುಂದೂಡಲಾಗಿದೆ.
Published: 19th July 2021 11:57 AM | Last Updated: 19th July 2021 02:05 PM | A+A A-

ಸಂಸತ್ತಿನಲ್ಲಿ ಮಾತನಾಡುತ್ತಿರುವ ರಾಜನಾಥ್ ಸಿಂಗ್
ನವದೆಹಲಿ; ಬಹು ನಿರೀಕ್ಷಿತ ಸಂಸತ್ತು ಮುಂಗಾರು ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಆರಂಭದ ಸಮಯದಲ್ಲೇ ವಿರೋಧ ಪಕ್ಷಗಳ ನಾಯಕರು ತೀವ್ರ ಗದ್ದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ಲೋಕಸಭೆ, ರಾಜ್ಯಸಭೆ ಕಲಾಪವನ್ನು ಮುಂದೂಡಲಾಗಿದೆ.
ಲೋಕಸಭಾ ಕಲಾಪ ಹಾಗೂ ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಸಂಸತ್ತಿನಲ್ಲಿ ವೈಎಸ್ಆರ್ ಸಿಪಿ ಮದ್ದಿಲ ಗುರುಮೂರ್ತಿ, ಬಿಜೆಪಿ ಮಂಗಳಾ ಸುರೇಶ್, ಐಯುಎಂಎಲ್ ಅಬ್ದುಸಮ್ಮಾದ್ ಸಮದಾನ್ ಮತ್ತು ಕಾಂಗ್ರೆಸ್ಸಿನ ವಿಜಯ್ ವಸಂತ್ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.
ಬಳಿಕ ನೂತನ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರು ಸಚಿವರಾದ ಹಿನ್ನೆಲೆ ಸಂಸತ್ತಿನಲ್ಲಿ ಉತ್ಸಾಹ ಹೆಚ್ಚಾಗಿರುತ್ತದೆ ಎಂದು ನಾನು ಭಾವಿಸಿದ್ದೇನೆ. ಈ ಬಾರಿ ಕೃಷಿ ಮತ್ತು ಗ್ರಾಮೀಣ ಹಿನ್ನೆಲೆಯ ಒಬಿಸಿ ಸಮುದಾಯದ ನಮ್ಮ ಸಹೋದ್ಯೋಗಿಗಳಿಗೆ ಮಂತ್ರಿ ಸ್ಥಾನ ನೀಡಲಾಗಿದೆ ಎಂದು ಹೇಳಿದರು.
ಮಹಿಳೆಯರು, ಒಬಿಸಿಗಳು, ರೈತರ ಪುತ್ರರು ಮಂತ್ರಿಗಳಾಗಿದ್ದರೆ ಬಹುಶಃ ಕೆಲವರು ಸಂತೋಷವಾಗಿರುವುದಿಲ್ಲ. ಅದಕ್ಕಾಗಿಯೇ ಅವರಿಗೆ ತಮ್ಮ ಪರಿಚಯ ಮಾಡಿಕೊಳ್ಳುವುದಕ್ಕೂ ಸಹ ಅನುಮತಿಸುವುದಿಲ್ಲ ಎಂದು ತಿಳಿಸಿದರು.
ಪ್ರಧಾನಿ ಮೋದಿಯವರು ನೂತನ ಸಚಿವರ ಕುರಿತು ಮಾತನಾಡುತ್ತಿದ್ದಂತೆಯೇ ವಿರೋಧ ಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳ ಈ ನಡೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಜನಾಥ್ ಸಿಂಗ್ ಅವರು ಮಾತನಾಡುತ್ತಿದ್ದಂತೆಯೇ ವಿಪಕ್ಷಗಳು ತೀವ್ರ ಗದ್ದಲವನ್ನುಂಟು ಮಾಡಿದರು. ಬಳಿಕ ಲೋಕಸಭಾ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಇನ್ನು ರಾಜ್ಯ ಸಭೆಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಅಬ್ದುಲ್ ವಹಾಬ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಳಿಕ ಸದನದಲ್ಲಿ ಹಿರಿಯ ನಟ ದಿಲೀಪ್ ಕುಮಾರ್ ಸೇರಿದಂತೆ ಈ ವರ್ಷ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಕಲಾಪವನ್ನು ಮಧ್ಯಾಹ್ನ 12.24ಕ್ಕೆ ಮುಂದೂಡಲಾಯಿತು.
ಮಧ್ಯಾಹ್ನ 12.24ಕ್ಕೆ ಮರಳಿ ರಾಜ್ಯಸಭಾ ಕಲಾಪ ಆರಂಭವಾದ ಬಳಿಕ ವಿರೋಧ ಪಕ್ಷದ ನಾಯಕರು ತೀವ್ರ ಗದ್ದಲವನ್ನುಂಟು ಮಾಡಿದರು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.