ಲಸಿಕೆ ಉಚಿತ ಎಂದಾದರೆ, ಖಾಸಗಿ ಆಸ್ಪತ್ರೆಗಳೇಕೆ ಹಣ ಪಡೆಯುತ್ತಿವೆ: ರಾಹುಲ್ ಗಾಂಧಿ

ಎಲ್ಲರಿಗೂ ಕೋವಿಡ್ ಲಸಿಕೆಗಳು ಉಚಿತವಾಗಿದ್ದರೆ, ಖಾಸಗಿ ಆಸ್ಪತ್ರೆಗಳೇಕೆ ಶುಲ್ಕ ವಿಧಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಎಲ್ಲರಿಗೂ ಕೋವಿಡ್ ಲಸಿಕೆಗಳು ಉಚಿತವಾಗಿದ್ದರೆ, ಖಾಸಗಿ ಆಸ್ಪತ್ರೆಗಳೇಕೆ ಶುಲ್ಕ ವಿಧಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

ಪ್ರಧಾನಿ ಮೋದಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಘೋಷಣೆ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಉಚಿತ ಲಸಿಕೆ ಘೋಷಣೆಯ ಕ್ರೆಡಿಟ್ ಸುಪ್ರೀಂ ಕೋರ್ಟ್ ಗೆ ಸಲ್ಲಬೇಕು. ಲಸಿಕೆ ಅಭಿಯಾನದ ಕುರಿತು ಕೇಂದ್ರ ಸರ್ಕಾರವನ್ನು  ನಿರಂತರವಾಗಿ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಇದೀಗ ಕೇಂದ್ರ ಸರ್ಕಾರ ಎಲ್ಲ ಒತ್ತಡಗಳಿಗೆ ಮಣಿದು ಉಚಿತ ಲಸಿಕೆ ಘೋಷಣೆ ಮಾಡಿದೆ. ಒಂದು ವೇಳೆ ಲಸಿಕೆ ಉಚಿತವಾಗಿ ವಿತರಣೆಯಾಗುತ್ತಿದ್ದರೆ ಖಾಸಗಿ ಆಸ್ಪತ್ರೆಗಳೇಕೆ ಲಸಿಕೆಗಳಿಗೆ ಶುಲ್ಕು ವಿಧಿಸುತ್ತಿವೆ ಎಂದು ರಾಹುಲ್ ಗಾಂಧಿ ಟ್ವೀಟ್  ಮಾಡಿದ್ದಾರೆ.

ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ಸರ್ಕಾರ ತಡವಾಗಿ ಉಚಿತ ವ್ಯಾಕ್ಸಿನೇಷನ್ ಬೇಡಿಕೆಯನ್ನು ಈಡೇರಿಸಿದೆ. ಆದರೆ ಸಮಸ್ಯೆಯನ್ನು ಸಂಪೂರ್ಣವಾಗಿ ಸರಿಪಡಿಸಲಾಗಿಲ್ಲ. ಈ ಹಿಂದೆ ಸಾಕಷ್ಟು ತಿಂಗಳಿಂದ ಮನಮೋಹನ್ ಸಿಂಗ್, ಸೋನಿಯಾಗಾಂಧಿ  ಮತ್ತು ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ ಮೋದಿ ಸರ್ಕಾರ ಅದನ್ನು ನಿರಾಕರಿಸಿತ್ತು. ನಂತರ ಸುಪ್ರೀಂ ಕೋರ್ಟ್ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಇದೀಗ ಸಾಮೂಹಿಕ ಒತ್ತಾಯಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಪ್ರತಿಯೊಬ್ಬ ನಾಗರಿಕರಿಗೂ  ಉಚಿತ ಲಸಿಕೆ ನೀಡುವ ಬೇಡಿಕೆಯನ್ನು ಭಾಗಶಃ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

ಅಂತೆಯೇ ಲಸಿಕೆ ವಿಚಾರವಾಗಿ ರಾಜ್ಯ ಸರ್ಕಾರಗಳನ್ನು ದೂಷಣೆ ಮಾಡುವ ಬದಲು ಮೋದಿ ಸರ್ಕಾರ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ಮೋದಿ ಸರ್ಕಾರ ತನ್ನ ಲಸಿಕೆ ನೀತಿಯನ್ನು ಜನವರಿ 16, ಮೇ 1 ರಂದು ಮತ್ತು ಈಗ ಮೂರು ಬಾರಿ ಬದಲಾಯಿಸಿದೆ. ಆ ಮೂಲಕ ಸೂಕ್ತ ಲಸಿಕಾ ಮಾನದಂಡವಿಲ್ಲದೇ ಜನರ  ಸಾವಿಗೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಜನತೆಯ ಕ್ಷಮೆ ಯಾಚಿಸಬೇಕು ಎಂದು ಸುರ್ಜೇವಾಲ ಆಗ್ರಹಿಸಿದ್ದಾರೆ.

ಅಂತೆಯೇ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಕ್ರಿಯಿ ಉಚಿತ ಲಸಿಕೆ ನೀತಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮತ್ತೋರ್ವ ಮುಖ್ಯಮಂತ್ರಿ ಅಶೋಕ್ ಗೆಹ್ಲೂಟ್ ಅವರು ಕೂಡ  18-44 ವರ್ಷ ವಯಸ್ಸಿನವರಿಗೆ ಲಸಿಕೆಗಳನ್ನು  ಖರೀದಿಸಿ ಒದಗಿಸಬೇಕು ಎಂದು ಯಾವ ರಾಜ್ಯಗಳು ಒತ್ತಾಯಿಸಿವೆ ಎಂದು ಸ್ಪಷ್ಟಪಡಿಸಿ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಅಂತೆಯೇ ನನ್ನ ಅರಿವಿಗೆ ಬಂದಂತೆ ಯಾವ ರಾಜ್ಯವೂ ಕೂಡ ಅಂತಹ ಬೇಡಿಕೆ ಇಟ್ಟಿಲ್ಲ. ಪ್ರಧಾನಿ ಮೋದಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎನಿಸುತ್ತಿದೆ ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com