ರೈತರ ಹಿತಾಸಕ್ತಿ ಕಾಪಾಡಲು 'ಮಹಾ' ಸರ್ಕಾರ ಕೇಂದ್ರದ ಕೃಷಿ ಕಾನೂನಿಗೆ ತಿದ್ದುಪಡಿ ತರಲಿದೆ: ಸಚಿವ ಥೋರಟ್

ರೈತರು ಮತ್ತು ಎಪಿಎಂಸಿಗಳನ್ನು ರಕ್ಷಿಸಲು ಮಹಾರಾಷ್ಟ್ರ ಸರ್ಕಾರ ತನ್ನ ಕೃಷಿ ಕಾನೂನನ್ನು ತಿದ್ದುಪಡಿ ಮಾಡಲಿದೆ ಎಂದು ರಾಜ್ಯ ಕಂದಾಯ ಸಚಿವ ಬಾಲಾಸಾಹೇಬ್ ಥೋರಟ್ ಹೇಳಿದ್ದಾರೆ.
ಬಾಲಾಸಾಹೇಬ್ ಥೋರಟ್
ಬಾಲಾಸಾಹೇಬ್ ಥೋರಟ್

ಮುಂಬೈ: ರೈತರು ಮತ್ತು ಎಪಿಎಂಸಿಗಳನ್ನು ರಕ್ಷಿಸಲು ಮಹಾರಾಷ್ಟ್ರ ಸರ್ಕಾರ ತನ್ನ ಕೃಷಿ ಕಾನೂನನ್ನು ತಿದ್ದುಪಡಿ ಮಾಡಲಿದೆ ಎಂದು ರಾಜ್ಯ ಕಂದಾಯ ಸಚಿವ ಬಾಲಾಸಾಹೇಬ್ ಥೋರಟ್ ಹೇಳಿದ್ದಾರೆ.

"ಕೇಂದ್ರ ಸರ್ಕಾರದ ಕೃಷಿ ಕಾನೂನುಗಳು ರೈತರ ಹಿತದೃಷ್ಟಿಗೆ ತೊಂದರೆಯಾಗುತ್ತದೆ ಎಂದು ನಾವು ಭಾವಿಸುವುದರಿಂದ ರಾಜ್ಯ ಕೃಷಿ ಕಾನೂನನ್ನು ತಿದ್ದುಪಡಿ ಮಾಡಲು ಬಯಸುತ್ತೇವೆ. ಈ ಸಂಬಂಧ ಜುಲೈ 5ರಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ತಿದ್ದುಪಡಿ ಕರಡನ್ನು ಮಂಡಿಸಲಾಗುವುದು ಎಂದರು.

ಪ್ರಸ್ತಾವಿತ ತಿದ್ದುಪಡಿಗಳು ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳ ರಕ್ಷಣೆ, ರೈತರ ಕುಂದುಕೊರತೆಗಳ ಪರಿಹಾರ. ಬೆಳೆ ವ್ಯಾಪಾರದ ಸಮಯದಲ್ಲಿ ಕೃಷಿಕರ ಹಿತಾಸಕ್ತಿಗಳ ರಕ್ಷಣೆಯನ್ನು ಖಚಿತಪಡಿಸುತ್ತದೆ. ಕೇಂದ್ರ ಕೃಷಿ ಕಾನೂನಿನಲ್ಲಿಲ್ಲದ ವ್ಯಾಪಾರಿಗಳಿಗೆ ಪರವಾನಗಿ ಕಡ್ಡಾಯಗೊಳಿಸುವ ನಿಬಂಧನೆಯನ್ನು ಸಹ ನಾವು ಸೇರಿಸುತ್ತೇವೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ ನಂತರ ಥೋರಟ್ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯ ಕಂದಾಯ ಸಚಿವ ಥೋರಟ್, ರಾಜ್ಯ ಸಹಕಾರ ಸಚಿವ ಬಾಲಾಸಾಹೇಬ್ ಪಾಟೀಲ್, ಕೃಷಿ ಸಚಿವ ದಾದಾ ಭೂಸ್ ಮತ್ತು ಎಂಒಎಸ್ ಕೃಷಿ ಮತ್ತು ಸಹಕಾರ ವಿಶ್ವಜೀತ್ ಕದಂ ಸೇರಿ ಪವಾರ್ ಅವರನ್ನು ಭೇಟಿ ಮಾಡಿ ಕರಡು ಕಾನೂನಿನ ಬಗ್ಗೆ ಚರ್ಚಿಸಿದರು.

ಸಹಕಾರಿ ಬ್ಯಾಂಕಿಂಗ್ ಕುರಿತು ಕೇಂದ್ರದ ಹೊಸ ಕಾನೂನಿನ ಬಗ್ಗೆಯೂ ನಾವು ಚರ್ಚಿಸಿದ್ದೇವೆ. ಅದು ಸಹಕಾರಿ ವಲಯಕ್ಕೆ ತೊಂದರೆಯಾಗುತ್ತದೆ ಎಂದು ಭಾವಿಸಿದ್ದೇವೆ ಎಂದು ಥೋರಟ್ ಹೇಳಿದರು.

ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಿ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಕಾನೂನು ಖಾತರಿ ನೀಡುವಂತೆ ಒತ್ತಾಯಿಸಿ 2020ರ ನವೆಂಬರ್‌ನಿಂದ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. 

ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಅನೇಕ ಸುತ್ತಿನ ಮಾತುಕತೆಗಳು ನಡೆದಿದ್ದರೂ ಯಾವುದೇ ಫಲ ನೀಡಿಲ್ಲ. 
ಇನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಗಳವಾರ "ಕೃಷಿ ಮಸೂದೆಗಳನ್ನು ಹೊರತುಪಡಿಸಿ ಇತರ ಆಯ್ಕೆಗಳ" ಕುರಿತು ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತನಾಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com