ವಿವಿಧ ರಾಜ್ಯಗಳಲ್ಲಿ ಬಳಕೆಯಾಗದ 5500 ಕ್ಕೂ ಹೆಚ್ಚು ವೆಂಟಿಲೇಟರ್ಗಳು: ಯುಪಿ, ಕರ್ನಾಟಕ ಅತಿದೊಡ್ಡ ಡೀಫಾಲ್ಟರ್
ಕೋವಿಡ್-19 ಎರಡನೇ ಅಲೆ ಅವಧಿಯಲ್ಲಿ ವೆಂಟಿಲೇಟರ್ ಗಳ ಕೊರತೆಯಿಂದ ಹಲವು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ರೋಗಿಗಳು ಜೀವ ರಕ್ಷಕ ಸಾಧನಗಳ ಕೊರತೆಯಿಂದ ತೊಂದರೆಪಡುತ್ತಿದ್ದರೂ, ವಿವಿಧ ರಾಜ್ಯಗಳಿಗೆ ಪೂರೈಕೆಯಾದ ನೂರಾರು ಯಂತ್ರಗಳು ಬಳಕೆಯಾಗದೆ ಬಿದ್ದಿವೆ.
Published: 20th June 2021 08:13 AM | Last Updated: 20th June 2021 08:20 AM | A+A A-

ವೆಂಟಿಲೇಟರ್ ಗಳ ಸಾಂದರ್ಭಿಕ ಚಿತ್ರ
ನವದೆಹಲಿ: ಕೋವಿಡ್-19 ಎರಡನೇ ಅಲೆ ಅವಧಿಯಲ್ಲಿ ವೆಂಟಿಲೇಟರ್ ಗಳ ಕೊರತೆಯಿಂದ ಹಲವು ಮಂದಿ ಸಾವನ್ನಪ್ಪಿದ್ದಾರೆ. ಆದರೆ, ರೋಗಿಗಳು ಜೀವ ರಕ್ಷಕ ಸಾಧನಗಳ ಕೊರತೆಯಿಂದ ತೊಂದರೆಪಡುತ್ತಿದ್ದರೂ, ವಿವಿಧ ರಾಜ್ಯಗಳಿಗೆ ಪೂರೈಕೆಯಾದ ನೂರಾರು ಯಂತ್ರಗಳು ಬಳಕೆಯಾಗದೆ ಬಿದ್ದಿವೆ.
ಮೇ ತಿಂಗಳವರೆಗೂ ಸುಮಾರು 5,500 ವೆಂಟಿಲೇಟರ್ ಗಳು ವಿವಿಧ ರಾಜ್ಯಗಳಲ್ಲಿ ಬಳಕೆಯಾಗದೆ ಸ್ಟೋರ್ ರೂಮ್ ನಲ್ಲಿ ಬಿದ್ದಿವೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ಮಾಹಿತಿ ನೀಡಿದೆ. ವೆಂಟಿಲೇಟರ್ ಗಳ ಖರೀದಿ, ಪೂರೈಕೆ ಮತ್ತು ದೇಶಾದ್ಯಂತ ಅಳವಡಿಸಲಾದ ವೆಂಟಿಲೇಟರ್ ಗಳ ಸಂಖ್ಯೆಯಲ್ಲಿಯೂ ಅಜ ಗಜಾಂತರ ವ್ಯತ್ಯಾಸ ಕಂಡುಬಂದಿದೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯಂತೆ, ವಿವಿಧ ತಯಾರಿಕಾ ಕಂಪನಿಗಳಿಗೆ 60,559 ವೆಂಟಿಲೇಟರ್ ಗಳ ಖರೀದಿಗೆ ಆರ್ಡರ್ ಮಾಡಲಾಗಿದ್ದು, ಈ ಪೈಕಿ 46,511 ವೆಂಟಿಲೇಟರ್ ಗಳನ್ನು ರಾಜ್ಯಗಳಲ್ಲಿ ಹಂಚಿಕೆ ಮಾಡಲಾಗಿದೆ. ಉಳಿದವು ಕೇಂದ್ರ ಸರ್ಕಾರದ ಆಸ್ಪತ್ರೆಗಳಿಗೆ ನೀಡಲಾಗಿದೆ. ಮೇ 25ರವರೆಗೂ 45,191 ವೆಂಟಿಲೇಟರ್ ಗಳನ್ನು ಪೂರೈಸಲಾಗಿದೆ. ಈ ಪೈಕಿ 39,640 ವೆಂಟಿಲೇಟರ್ ಗಳು ರಾಜ್ಯಗಳಿಂದ ಅಳವಡಿಸಲಾಗಿದೆ. 5,551 ವೆಂಟಲೇಟರ್ ಗಳು ಬಳಕೆಯಾಗದೆ ಬಿದ್ದಿವೆ.
ಬಿಜೆಪಿ ಆಡಳಿತಾವಿರುವ ಉತ್ತರ ಪ್ರದೇಶ, ಕರ್ನಾಟಕ ಮತ್ತು ಗುಜರಾತ್ ನಲ್ಲಿ ಗರಿಷ್ಠ ಸಂಖ್ಯೆಯ ವೆಂಟಿಲೇಟರ್ ಗಳು ಬಳಕೆಯಾಗದೆ ಹಾಗೆಯೇ ಉಳಿದಿವೆ ಎಂದು ಮಾಹಿತಿ ನೀಡಲಾಗಿದೆ. ಉತ್ತರ ಪ್ರದೇಶಕ್ಕೆ ಒಟ್ಟಾರೇ 5,116 ಯಂತ್ರಗಳನ್ನು ಪೂರೈಸಲಾಗಿದ್ದು, ಈ ಪೈಕಿ 4,010 ವೆಂಟಿಲೇಟರ್ ಗಳು ಮೇ ತಿಂಗಳವರೆಗೂ ಕಾರ್ಯನಿರ್ವಹಿಸಿದ್ದರೆ, 1,106 ವೆಂಟಿಲೇಟರ್ ಗಳನ್ನು ಇನ್ನೂ ಅಳವಡಿಸಬೇಕಾಗಿದೆ.
ಗುಜರಾತ್ ಮತ್ತು ಕರ್ನಾಟಕಕ್ಕೆ ಕ್ರಮವಾಗಿ 5,600 ಮತ್ತು 2,913 ವೆಂಟಿಲೇಟರ್ ಪೂರೈಕೆಯಾಗಿದೆ. ಈ ಪೈಕಿ ಕ್ರಮವಾಗಿ 4,991 ಮತ್ತು 2,004 ವೆಂಟಿಲೇಟರ್ ಗಳು ಮಾತ್ರ ಅಳವಡಿಕೆಯಾಗಿವೆ. ಅಂದರೆ ಕರ್ನಾಟಕದಲ್ಲಿ ಸುಮಾರು 900 ಮತ್ತು ಗುಜರಾತ್ ನಲ್ಲಿ ಸುಮಾರು 600 ವೆಂಟಿಲೇಟರ್ ಗಳು ಬಳಕೆಯಾಗದೆ ಬಿದ್ದಿವೆ. ಜಾರ್ಖಂಡ್ ನಲ್ಲಿ ನೀಡಲಾದ 1,210 ವೆಂಟಿಲೇಟರ್ ಗಳ ಪೈಕಿ ಕೇವಲ 461 ವೆಂಟಿಲೇಟರ್ ಗಳನ್ನು ಮಾತ್ರ ಅಳವಡಿಸಲಾಗಿದೆ.