ಕೋವಿಡ್-19: ದಾಖಲೆ ಬರೆದ ಆಂಧ್ರ ಪ್ರದೇಶ, ಒಂದೇ ದಿನದಲ್ಲಿ 13 ಲಕ್ಷ ಡೋಸ್ ಲಸಿಕೆ ವಿತರಣೆ, 1 ಕೋಟಿ ಜನರಿಗೆ ಮೊದಲ ಡೋಸ್

ಕೋವಿಡ್ ಲಸಿಕೆ ವಿತರಣೆಯಲ್ಲಿ ನೆರೆಯ ಆಂಧ್ರ ಪ್ರದೇಶದ ದಾಖಲೆ ಬರೆದಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 13 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ.
ಕೋವಿಡ್-19: ದಾಖಲೆ ಬರೆದ ಆಂಧ್ರ ಪ್ರದೇಶ, ಒಂದೇ ದಿನದಲ್ಲಿ 13 ಲಕ್ಷ ಡೋಸ್ ಲಸಿಕೆ ವಿತರಣೆ, 1 ಕೋಟಿ ಜನರಿಗೆ ಮೊದಲ ಡೋಸ್

ಅಮರಾವತಿ: ಕೋವಿಡ್ ಲಸಿಕೆ ವಿತರಣೆಯಲ್ಲಿ ನೆರೆಯ ಆಂಧ್ರ ಪ್ರದೇಶದ ದಾಖಲೆ ಬರೆದಿದ್ದು ಕಳೆದ 24 ಗಂಟೆಗಳ ಅವಧಿಯಲ್ಲಿ 13 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದೆ.

ಈ ಬಗ್ಗೆ ಆಂಧ್ರ ಪ್ರದೇಶ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಆಂಧ್ರ ಪ್ರದೇಶದ ಎಲ್ಲಾ 13 ಜಿಲ್ಲೆಗಳಲ್ಲಿ 2,200 ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ನಿನ್ನೆ ಬೆಳಿಗ್ಗೆ 6 ರಿಂದ ಸಂಜೆ 8 ರವರೆಗೆ ಸುಮಾರು 13.26 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ರಾಜ್ಯದ ಮೆಗಾ ಲಸಿಕೆ ವಿತರಣಾ ಕಾರ್ಯಕ್ರಮದಡಿಯಲ್ಲಿ ಒಂದು ದಿನದಲ್ಲಿ ಇಷ್ಟು ಪ್ರಮಾಣದ ಲಸಿಕೆ ನೀಡಿರುವುದು ಇದೇ ಮೊದಲು ಎಂದು ಕೋವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಕೆ.ಎಸ್. ಜವಾಹರ್ ರೆಡ್ಡಿ ಹೇಳಿದ್ದಾರೆ.

ಕೇಂದ್ರದಲ್ಲಿನ ಸರ್ಕಾರವು ಲಸಿಕೆ ಪೂರೈಕೆಯನ್ನು ನಿರ್ವಹಿಸಿದರೆ ನಮ್ಮ ವೈದ್ಯಕೀಯ ತಂಡ ಮತ್ತು ಇತರ ಸಿಬ್ಬಂದಿ ಒಂದು ದಿನದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ತೆಗೆದುಕೊಳ್ಳಬಹುದು ಎಂದು ಇದು ತೋರಿಸಿದೆ. ಅಂತೆಯೇ ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆ ಪಡೆದವರ ಸಂಖ್ಯೆ ಒಂದು ಕೋಟಿ  ಗಡಿ ದಾಟಿದ್ದು, ಜನವರಿ 16 ರಿಂದ ಲಸಿಕಾ ಅಭಿಯಾನ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ರಾಜ್ಯದ 1.10 ಕೋಟಿ ಜನರಿಗೆ ಮೊದಲ ಡೋಸ್ ಮತ್ತು 27.29 ಲಕ್ಷ ಎರಡನೇ ಡೋಸ್ ದೊರೆತಿದೆ. ನಿನ್ನೆಯ ಲಸಿಕೆ ವಿತರಣೆ ಪ್ರಮಾಣ ಸೇರಿದಂತೆ ಆಂಧ್ರ ಪ್ರದೇಶದಲ್ಲಿ ಲಸಿಕೆ ವಿತರಣೆ ಪ್ರಮಾಣ 1.37 ಕೋಟಿ  ಡೋಸ್ ಗೆ ಏರಿಕೆಯಾಗಿದೆ.   

ಈ ಹಿಂದೆ ಆಂಧ್ರ ಸರ್ಕಾರ ಏಪ್ರಿಲ್ ನಲ್ಲಿ ಲಸಿಕಾ ಉತ್ಸವ ಸಂದರ್ಭದಲ್ಲಿ ಒಂದೇ ದಿನ 6 ಲಕ್ಷ ಜನರಿಗೆ ಲಸಿಕೆ ಹಾಕಿತ್ತು. ಬಳಿಕ ಈ ಪ್ರಮಾಣವನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ ಭಾನುವಾರ 10 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ. 

ಗರ್ಭಿಣಿ-ಬಾಣಂತಿಯರಿಗೂ ಲಸಿಕೆ
ಇದೇ ವೇಳೆ ಕೊರೋನಾ ಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ತಗುಲುತ್ತದೆ ಎಂಬ ತಜ್ಞರ ಎಚ್ಚರಿಕೆಯ ಹಿನ್ನಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ 5 ವರ್ಷಕ್ಕಿಂತ ಕಡಿಮೆ ಅಥವಾ ತಾಯಿ ಹಾಲು ಕುಡಿಯುತ್ತಿರುವ ಮಕ್ಕಳ ತಾಯಂದಿರಿಗೆ ಮತ್ತು ಗರ್ಭಿಣಿ ಮಹಿಳೆಯರಿಗೂ ಲಸಿಕೆ ನೀಡಿಕೆಯನ್ನು  ಆರಂಭಿಸಿದೆ.  

ಸಚಿವಾಲಯದ ಮೂಲಗಳ ಪ್ರಕಾರ ಈ ವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ ಶೇ.56.63 ಜನರಿಗೆ ಈವರೆಗೆ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ನೀಡಲಾಗಿದ್ದು, ಉಳಿದ ಶೇ.43.4 ಮಂದಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಅಂತೆಯೇ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸುಮಾರು 18.55 ಲಕ್ಷ ತಾಯಂದಿರ ಪೈಕಿ 5.63 ಲಕ್ಷ ತಾಯಂದಿರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಭಾನುವಾರ 5,646 ಹೊಸ ಸೋಂಕು ಪ್ರಕರಣಗಳು ಪತ್ತೆ
ಇದೇ ವೇಳೆ ಆಂಧ್ರ ಪ್ರದೇಶದಲ್ಲಿ ಭಾನುವಾರ ಸುಮಾರು 1ಲಕ್ಷಕ್ಕೂ ಅಧಿಕ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಈ ಪೈಕಿ 5,646 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. ಅಂತೆಯೇ ಭಾನುವಾರ 7,772 ಸೋಂಕಿತರು ಚೇತರಿಸಿಕೊಂಡಿದ್ದು, 50 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com