ಕೋವಿಡ್ ನಡುವೆ 12ನೇ ತರಗತಿ ಪರೀಕ್ಷೆ; ಅನಾಹುತ ಸಂಭವಿಸಿದರೆ ಸರ್ಕಾರವೇ ಹೊಣೆ: ಆಂಧ್ರ ಸರ್ಕಾರಕ್ಕೆ 'ಸುಪ್ರೀಂ' ಎಚ್ಚರಿಕೆ

ಕೋವಿಡ್ ಸಾಂಕ್ರಾಮಿಕದ ನಡುವೆಯೇ 12ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವ ಆಂಧ್ರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದು, ಮಾರಣಾಂತಿಕತೆಯಿಲ್ಲದೆ ಪರೀಕ್ಷೆಗಳನ್ನು ನಡೆಸುವ ಕುರಿತು ಸರ್ಕಾರ ಮನವರಿಕೆ ಮಾಡಿಕೊಡದ ಹೊರತು ರಾಜ್ಯ ಮಂಡಳಿ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ನಡುವೆಯೇ 12ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವ ಆಂಧ್ರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದು, ಮಾರಣಾಂತಿಕತೆಯಿಲ್ಲದೆ ಪರೀಕ್ಷೆಗಳನ್ನು ನಡೆಸುವ ಕುರಿತು ಸರ್ಕಾರ ಮನವರಿಕೆ ಮಾಡಿಕೊಡದ ಹೊರತು ರಾಜ್ಯ ಮಂಡಳಿ ಪರೀಕ್ಷೆಗಳನ್ನು  ನಡೆಸಲು ಅನುಮತಿ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅಂಕಗಳ ಬದಲಾಗಿ ಶ್ರೇಣಿಗಳನ್ನು ನೀಡಲಾಗುತ್ತಿರುವುದರಿಂದ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ವಿಶ್ವಾಸಾರ್ಹ ಪರ್ಯಾಯ ವ್ಯವಸ್ಥೆಗಳಿಲ್ಲದ ಕಾರಣ ಜುಲೈ ಕೊನೆಯ ವಾರದಲ್ಲಿ ಪರೀಕ್ಷೆಗಳನ್ನು ಭೌತಿಕ ಕ್ರಮದಲ್ಲಿ ನಡೆಸುವುದಾಗಿ ರಾಜ್ಯ ಸರ್ಕಾರ ಬುಧವಾರ  ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ನಲ್ಲಿ ಮಾಹಿತಿ ನೀಡಿದ್ದು, ಪರೀಕ್ಷೆಗಳನ್ನು ನಡೆಸುವಾಗ ತೆಗೆದುಕೊಳ್ಳುವ ಮುನ್ನೆಚ್ಚರಿಕಾ ಕ್ರಮಗಳನ್ನೂ ಸಹ ಪಟ್ಟಿ ಮಾಡಿತ್ತು. ಕೋವಿಡ್ ಸುರಕ್ಷತಾ ನಿಯಮಗಳನ್ನು  ಅನುಸರಿಸಿ ಪರೀಕ್ಷಾ ಕೇಂದ್ರಕ್ಕೆ (ಸರಿಸುಮಾರು 25*25 ಅಡಿ ಕೋಣೆಯಲ್ಲಿ) ಕೇವಲ 15 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಲಾಗುತ್ತದೆ. ಪರೀಕ್ಷೆಗಳ ನಡೆಸಲು ಸರ್ಕಾರಕ್ಕೆ 35,000 ಕೊಠಡಿಗಳು ಬೇಕಾಗುತ್ತವೆ ಎಂದು ಸ್ಪಷ್ಟಪಡಿಸಿತ್ತು. 

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠ ಗುರುವಾರ ಸರ್ಕಾರ ಸಲ್ಲಿಸಿದ ಅಫಿಡವಿಟ್‌ಗೆ ಸಮಾಧಾನಗೊಳ್ಳಲಿಲ್ಲ. 'ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ಬಹಳ ಅನಿಶ್ಚಿತವಾಗಿದೆ ಮತ್ತು ಜುಲೈ ಕೊನೆಯ ವಾರದಲ್ಲಿ  ಏನಾಗಬಹುದು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಪೀಠ, ಸಂಭವನೀಯ ಮೂರನೇ ಅಲೆ ಮತ್ತು ಡೆಲ್ಟಾ ರೂಪಾಂತರದ ಬಗ್ಗೆ ತಜ್ಞರು ಎತ್ತಿದ ಆತಂಕಗಳನ್ನು ಉಲ್ಲೇಖಿಸಿತು. ಅಂತೆಯೇ ಇತರೆ ರಾಜ್ಯಗಳು ತಮ್ಮ ಮಂಡಳಿಯ ಪರೀಕ್ಷೆಗಳನ್ನು ರದ್ದುಗೊಳಿಸಿರುವುದನ್ನು ಕೂಡ  ನ್ಯಾಯಪೀಠ ಉಲ್ಲೇಖಿಸಿತು.

ಅನಾಹುತ ಸಂಭವಿಸಿದರೆ ಸರ್ಕಾರವೇ ಹೊಣೆ
ಇದೇ ವೇಳೆ ಕೋವಿಡ್‌ನಿಂದಾಗಿ ಯಾವುದೇ ಮಾರಣಾಂತಿಕ ಘಟನೆಗಳು ಸಂಭವಿಸಿದಲ್ಲಿ ರಾಜ್ಯ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನ್ಯಾಯಪೀಠ ಆಂಧ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.

ಪರೀಕ್ಷಾ ಸಿದ್ಧತೆ ವಿವರ ನೀಡಿ ಎಂದು ವಿಚಾರಣೆ ಮುಂದೂಡಿಕೆ
ಅಂತೆಯೇ ಅಪಾಯಗಳಿಲ್ಲದೇ ಪರೀಕ್ಷೆ ನಡೆಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಎಂದು ಹೇಳಿ ಪೀಠ ಅರ್ಜಿ ವಿಚಾರಣೆಯನ್ನು ನಾಳೆಗೆ ಅಂದರೆ ಶುಕ್ರವಾರಕ್ಕೆ ಮುಂದೂಡಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com