ಕೆಂಪುಕೋಟೆ ಗಲಭೆ ಪ್ರಕರಣ: ಪ್ರಮುಖ ಆರೋಪಿ ಗುರ್ಜೋತ್ ಸಿಂಗ್ ಬಂಧನ
ಕೃಷಿ ಕಾನೂನು ವಿರೋಧಿ ಹೋರಾಟ ಮತ್ತು ಕೆಂಪುಕೋಟೆಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಗುರ್ಜೋತ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Published: 28th June 2021 01:44 PM | Last Updated: 28th June 2021 01:44 PM | A+A A-

ಕೆಂಪುಕೋಟೆ ಗಲಭೆ ಮತ್ತು ಬಂಧಿತ ಆರೋಪಿ ಗುರ್ಜೋತ್ ಸಿಂಗ್)
ಅಮೃತ್ ಸರ: ಕೃಷಿ ಕಾನೂನು ವಿರೋಧಿ ಹೋರಾಟ ಮತ್ತು ಕೆಂಪುಕೋಟೆಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಗುರ್ಜೋತ್ ಸಿಂಗ್ ನನ್ನು ಪಂಜಾಬ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪಂಜಾಬ್ ನ ಅಮೃತ್ ಸರದಲ್ಲಿ ಗುರ್ಜೋತ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದು, ಈತನ ಬಂಧನಕ್ಕಾಗಿ ದೆಹಲಿ ಮತ್ತು ಪಂಜಾಬ್ ಪೊಲೀಸರು ಬಲೆ ಬೀಸಿದ್ದರು. ಅಲ್ಲದೆ ಈತನ ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂ ಬಹುಮಾನ ಕೂಡ ಘೋಷಣೆ ಮಾಡಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿಯ ವಿಶೇಷ ವಿಭಾಗದ ಡಿಸಿಪಿ ಸಂಜೀವ್ ಯಾದವ್ ಅವರು, ಕೆಂಪು ಕೋಟೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮೂಲದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರ ವಿಶೇಷ ವಿಭಾಗವು ಬಂಧಿಸಿದೆ. ಆರೋಪಿಯನ್ನು ಗುರ್ಜೋತ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತನನ್ನು ಅಮೃತಸರದಲ್ಲಿ ಬಂಧಿಸಲಾಗಿದೆ. ಗುರ್ಜೋತ್ ಸಿಂಗ್ ಪತ್ತೆಗಾಗಿ ಇಲಾಖೆಯು 1 ಲಕ್ಷ ರೂ ನಗದು ಬಹುಮಾನ ಘೋಷಿಸಿತ್ತು ಎಂದು ಹೇಳಿದ್ದಾರೆ.
ಜನವರಿ 26, ಗಣರಾಜ್ಯೋತ್ಸವ ದಿನದಂದು ಸಾವಿರಾರು ರೈತರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಟ್ಯ್ರಾಕ್ಟರ್ ರ‍್ಯಾಲಿ ನಡೆಸಿದ್ದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ಸಂಭವಿಸಿತ್ತು. ಆಗ ಕೆಲವು ಪ್ರತಿಭಟನಕಾರರು ಕೆಂಪು ಕೋಟೆ ಮೇಲೆ ಹತ್ತಿ ಧರ್ಮ ಸೂಚಕ ಧ್ವಜವನ್ನು ಹಾರಿಸಿದ್ದರು.