ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ; ಉಕ್ಕಿ ಹರಿಯುತ್ತಿರುವ ರಿಷಿಗಂಗಾ ನದಿ, ಪ್ರವಾಹ ಭೀತಿ

ಉತ್ತರಾಖಂಡದಲ್ಲಿ ಮತ್ತೊಂದು ಮೇಘಸ್ಫೋಟ ಸಂಭವಿಸಿದ್ದು, ಭಾರಿ ಮಳೆಯಿಂದಾಗಿ ರಿಷಿಗಂಗಾ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಭೀತಿ ಸೃಷ್ಟಿಯಾಗಿದೆ.
ಉತ್ತರಾಖಂಡದಲ್ಲಿ ಮೇಘಸ್ಫೋಟ
ಉತ್ತರಾಖಂಡದಲ್ಲಿ ಮೇಘಸ್ಫೋಟ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮತ್ತೊಂದು ಮೇಘಸ್ಫೋಟ ಸಂಭವಿಸಿದ್ದು, ಭಾರಿ ಮಳೆಯಿಂದಾಗಿ ರಿಷಿಗಂಗಾ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಭೀತಿ ಸೃಷ್ಟಿಯಾಗಿದೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಿನ್ಸಾರ್ ಗುಡ್ಡ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಪರಿಣಾಮ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ರಿಷಿಗಂಗಾ ನದಿ ಉಕ್ಕಿ ಹರಿಯುತ್ತಿದ್ದು, ಅಪಾಯದ ಮಟ್ಟದತ್ತ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಚಮೋಲಿ ಜಿಲ್ಲೆಯ ಪ್ರಮುಖ ಮಾರುಕಟ್ಟೆಯಲ್ಲಿ  ಭಾರಿ ಮಳೆಯಿಂದಾಗಿ ಅಂಗಡಿ ಮುಂಗಟ್ಟುಗಳು ಕೊಚ್ಚಿಕೊಂಡು ಹೋಗಿವೆ. ಅಕ್ಷರಶಃ ಇಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆ ನೀರಿನೊಂದಿಗೆ ಹರಿದ ಕೆಸರಿನಲ್ಲಿ ಇಡೀ ಮಾರುಕಟ್ಟೆ ಹೂತುಹೋಗಿದೆ. 

ಪ್ರಸ್ತುತ ಚಮೋಲಿ ಜಿಲ್ಲಾಡಳಿತ ಮಳೆ ಬಾಧಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದೆ. 

ಇನ್ನು ಮೇಘಸ್ಫೋಟದ ಬಗ್ಗೆ ಸ್ವತಃ ಉತ್ತರಾಖಂಡ ಸಿಎಂ ತೀರತ್ ಸಿಂಗ್ ರಾವತ್ ಅವರೂ ಕೂಡ ಪ್ರತಿಕ್ರಿಯೆ ನೀಡಿದ್ದು, ಮೇಘಸ್ಫೋಟದಿಂದಾಗಿ ಉಂಟಾದ ಸಮಸ್ಯೆಯಿಂದಾಗಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ಕ್ರಮಕೈಗೊಳ್ಳಲಾಗಿದೆ. ಅಂತೆಯೇ ಮಳೆ ಬಾಧಿತ ಪ್ರದೇಶಗಳಲ್ಲಿ ಪರಿಹಾರ  ಕಾರ್ಯಾಚರಣೆಗೆ ಆದೇಶಿಸಲಾಗಿದ್ದು, ಮನೆ ಕಳೆದುಕೊಂಡವರಿಗೆ ಆಹಾರ, ನೀರು ಮತ್ತು ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಂತೆಯೇ ಮೇಘಸ್ಫೋಟದಲ್ಲಿ ಉಂಟಾದ ಸಾವು-ನೋವು ಮತ್ತು ನಷ್ಟದ ಕುರಿತು ಮಾಹಿತಿ ಬಂದಿಲ್ಲ. ಆದರೆ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ರಾವತ್ ಟ್ವೀಟ್ ಮಾಡಿದ್ದಾರೆ. 

ಸ್ಥಳೀಯ ಅಧಿಕಾರಿಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗಾಗಿ ದೌಡಾಯಿಸಿದ್ದಾರೆ. ಈ ಮಧ್ಯೆ, ಇಂದು ರಾತ್ರಿ 8 ಗಂಟೆ ಸುಮಾರಿಗೆ, ತಪೋವನ್ ಪ್ರದೇಶದ ರಿಷಿಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ, ಇದರಿಂದಾಗಿ ಅಧಿಕಾರಿಗಳು ನಡೆಸುತ್ತಿರುವ ಎನ್‌ಟಿಪಿಸಿ  ಯೋಜನೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ. ಚಮೋಲಿ ಜಿಲ್ಲೆ ಸಮೀಪದಲ್ಲಿ ವಾಸಿಸುವ ಗ್ರಾಮಸ್ಥರಿಗೆ ನದಿ ಪ್ರದೇಶದಿಂದ ದೂರವಿರಲು ಎಚ್ಚರಿಕೆ ನೀಡಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ಸ್ವಾತಿ ಭಡೋರಿಯಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com