ಸರ್ಕಾರದ ನಿರಾಸಕ್ತಿ, ವೈಫಲ್ಯಗಳಿಂದ ಸೃಷ್ಟಿಯಾದ ಅನುಕಂಪದಿಂದ ವಿದೇಶಿ ನೆರವು ಒಪ್ಪುವ ನವ ಭಾರತ: ಶಶಿ ತರೂರ್

ಕೋವಿಡ್-19 ಎರಡನೆ ಅಲೆ ನಿಯಂತ್ರಣ ನಿಟ್ಟಿನಲ್ಲಿ ವಿದೇಶಗಳಿಂದ ನೆರವು ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶಶಿ ತರೂರ್
ಶಶಿ ತರೂರ್

ನವದೆಹಲಿ: ಕೋವಿಡ್-19 ಎರಡನೆ ಅಲೆ ನಿಯಂತ್ರಣ ನಿಟ್ಟಿನಲ್ಲಿ ವಿದೇಶಗಳಿಂದ ನೆರವು ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ಶಶಿ ತರೂರ್ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ನಿರಾಸಕ್ತಿ ಮತ್ತು ವೈಫಲ್ಯಗಳಿಂದ ಸೃಷ್ಟಿಯಾದ ಅನುಕಂಪದಿಂದಾಗಿ ವಿದೇಶಿ ನೆರವು ಒಪ್ಪಿಕೊಳ್ಳಬೇಕಾದ ನವ ಭಾರತ ಸೃಷ್ಟಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.

ಟ್ವೀಟರ್ ನಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿರುವ ಶಶಿ ತರೂರ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾನುವಾರ ಮಾಡಿದ್ದ ಟ್ವೀಟ್ ನ್ನು ಟ್ಯಾಗ್ ಮಾಡಿದ್ದಾರೆ. ದೇಶದಲ್ಲಿನ ಕೋವಿಡ್ ಪರಿಸ್ಥಿತಿ ಎದುರಿಸಲು ವಿವಿಧ ದೇಶಗಳು ಆಮ್ಲಜನಕ, ರೆಮಿಡಿಸಿವಿರ್ ವಯಲ್ಸ್ ಮತ್ತಿತರ ಅಗತ್ಯ ಔಷಧಿಗಳ ನೆರವು ನೀಡುತ್ತಿವೆ. ಅಮೆರಿಕದಿಂದ ಸಿಂಗಪುರ, ಜರ್ಮನಿಯಿಂದ ಥಾಯ್ಲೆಂಡ್ ವರೆಗೆ ಜಗತ್ತು  ಭಾರತಕ್ಕೆ ನೆರವಾಗಿ ನಿಂತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದರು.

ಸರ್ಕಾರದ ವಿರುದ್ಧ ಕಿಡಿಕಾರಿರುವ ತರೂರ್, ಇದು ನಯಾ ಭಾರತ್, ನಮ್ಮ ವೈಫಲ್ಯಗಳಿಂದ ಮೂಡಿದ ಅನುಕಂಪ ಮತ್ತು ಸರ್ಕಾರದ ನಿರಾಸಕ್ತಿ ಕಾರಣ ಇದನ್ನು ಒಪ್ಪಿಕೊಳ್ಳಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಆತ್ಮ ನಿರ್ಭರ್ ಭಾರತ್ ಚಿಂತನೆಗೆ ಪ್ರತಿಯಾಗಿ ಪರಮಾತ್ಮ ನಿರ್ಭರ್ ಭಾರತ್ ಹ್ಯಾಷ್ ಟ್ಯಾಗ್ ನ್ನು ವ್ಯಂಗ್ಯವಾಗಿ ಬಳಸಿದ್ದಾರೆ.

ಭಾರತದಲ್ಲಿನ ಕೋವಿಡ್-19 ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಅಮೆರಿಕ, ರಷ್ಯಾ, ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಐರ್ಲೆಂಡ್, ಬೆಲ್ಜಿಯಂ,ರೊಮಾನಿಯಾ, ಸಿಂಗಾಪುರ, ಸ್ವಿಡನ್ ಮತ್ತು ಕುವೈತ್ ಸೇರಿದಂತೆ ಅನೇಕ ರಾಷ್ಟ್ರಗಳಿಂದ ಬೃಹತ್ ಪ್ರಮಾಣದ ವೈದ್ಯಕೀಯ ಸಲಕರಣೆಗಳನ್ನು ಭಾರತ ಪಡೆದುಕೊಂಡಿದೆ.

ಭಾರತಕ್ಕೆ ವಿವಿಧ ದೇಶಗಳಿಂದ ಬರುತ್ತಿರುವ  ಔಷಧ ಮತ್ತು ಪರಿಹಾರ ಸಾಮಾಗ್ರಿಗಳ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು, ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪಕ್ಷ ಕಳೆದ ವಾರ ಆಗ್ರಹಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com