ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಳದಲ್ಲಿ ಕೋವಿಡ್ ಸುರಕ್ಷತಾ ಸೌಕರ್ಯ ಸ್ಥಾಪನೆ: ಹೈಕೋರ್ಟ್ ಗೆ ಕೇಂದ್ರ ಸರ್ಕಾರ ಅಫಿಡವಿಟ್

ಸದ್ಯ ಪ್ರಗತಿಯಲ್ಲಿರುವ ಸೆಂಟ್ರಲ್ ವಿಸ್ಟಾ ಯೋಜನೆ ಕಾಮಗಾರಿಗಳನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಇದರ ನಿರ್ಮಾಣವನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ ಎಂದು ಮಂಗಳವಾರ ದೆಹಲಿ ಹೈಕೋರ್ಟ್ ಗೆ ಹೇಳಿದೆ.
ಸೆಂಟ್ರಲ್ ವಿಸ್ಟಾ ಯೋಜನೆಗೆ ಚಾಲನೆ ನೀಡಿದ್ದ ಪ್ರಧಾನಿ ಮೋದಿಯ ಚಿತ್ರ
ಸೆಂಟ್ರಲ್ ವಿಸ್ಟಾ ಯೋಜನೆಗೆ ಚಾಲನೆ ನೀಡಿದ್ದ ಪ್ರಧಾನಿ ಮೋದಿಯ ಚಿತ್ರ

ನವದೆಹಲಿ: ಸದ್ಯ ಪ್ರಗತಿಯಲ್ಲಿರುವ ಸೆಂಟ್ರಲ್ ವಿಸ್ಟಾ ಯೋಜನೆ ಕಾಮಗಾರಿಗಳನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಇದರ ನಿರ್ಮಾಣವನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ. ಯೋಜನೆಯನ್ನು ಸ್ಥಗಿತಗೊಳಿಸುವ ಮತ್ತೊಂದು ಪ್ರಯತ್ನವಾಗಿದೆ ಎಂದು ಮಂಗಳವಾರ ದೆಹಲಿ ಹೈಕೋರ್ಟ್ ಗೆ ಹೇಳಿದೆ.

 ಕಾನೂನು ಪ್ರಕ್ರಿಯೆಯ ದುರುಪಯೋಗ ಆಧಾರದ ಮೇಲೆ ಅರ್ಜಿಯನ್ನು ಭಾರೀ ದಂಡದೊಂದಿಗೆ ವಜಾಗೊಳಿಸಬೇಕೆಂದು
 ಕೇಂದ್ರ ಸರ್ಕಾರ ಹೈಕೋರ್ಟ್ ಬಳಿ ಮನವಿ ಮಾಡಿಕೊಂಡಿದೆ.

ಯೋಜನೆ ಆರಂಭದಿಂದಲೂ ಒಂದಲ್ಲಾ ಒಂದು ನೆಪದಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಲೇ ಇದೆ. ಪ್ರಸ್ತುತ ಸಂದರ್ಭದಲ್ಲಿ
ಸಾರ್ವಜನಿಕರ ಗಮನವನ್ನು ಸೆಳೆಯಲು ಅರ್ಜಿದಾರರು ಇಂತಹ ಪ್ರಯತ್ನ ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ತನ್ನ ಅಫಿಡವಿಟ್ ನಲ್ಲಿ ತಿಳಿಸಿದೆ.

ಯೋಜನೆ ಕಾಮಗಾರಿ ನಡೆಯುವ ಸ್ಥಳದಲ್ಲಿ  ಕರ್ಪ್ಯೂ ಜಾರಿಯಾದ ಮುಂಚಿನಿಂದಲೂ 400 ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ. ಅಲ್ಲಿಯೇ ಅವರು ವಾಸ್ತವ್ಯ ಹೂಡಿದ್ದಾರೆ. ಅರ್ಜಿದಾರರಿಗೆ ಈ ಸಂಗತಿಯ ಬಗ್ಗೆ ಸಂಪೂರ್ಣ ತಿಳಿದಿದೆ. ಆದಾಗ್ಯೂ, ದುರುದ್ದೇಶದಿಂದ ಅರ್ಜಿ ಸಲ್ಲಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಸಾಂಕ್ರಾಮಿಕದ ಸಂದರ್ಭದಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆ ಕಾಮಗಾರಿ ಚಟುವಟಿಕೆಗಳನ್ನು ನಿಲ್ಲಿಸುವಂತೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶದೊಂದಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ನಂತರ ಕೇಂದ್ರ ಸರ್ಕಾರ ಈ ರೀತಿಯ ಹೇಳಿಕೆ ನೀಡಿದೆ. ಕಾಮಗಾರಿ ಸ್ಥಳದಲ್ಲಿ ಕೆಲಸಗಾರರ ವಾಸ್ತವ್ಯಕ್ಕೆ ವ್ಯವಸ್ಥೆ ಹಾಗೂ ಸರಕು ಸಾಗಣಿಕೆ ಅನುಮತಿ ಪಡೆದಿರುವ ಬಗ್ಗೆ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಮಾಹಿತಿಯನ್ನು ಸಲ್ಲಿಸಿದೆ.

ಇದೇ ವೇಳೆ ಕೆಲಸದ ಸ್ಥಳದಲ್ಲಿ ಕೋವಿಡ್ ಸುರಕ್ಷತಾ ಸೌಕರ್ಯವೊಂದನ್ನು ಸ್ಥಾಪಿಸಲಾಗಿದ್ದು,  ಇಲ್ಲಿಯೇ ಉಳಿದು ಕೆಲಸ ಮುಂದುವರೆಸಲು ಇಚ್ಚಿಸುವವರಿಗೆ ವಾಸ್ತವ್ಯ ಕಲ್ಪಿಸಲಾಗಿದೆ. ಕೋವಿಡ್ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್, ಸಾಮಾಜಿಕ ಅಂತರ, ಮಾಸ್ಕ್ ಮತ್ತಿತರ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಲ್ಲದೆ, ಎಲ್ಲಾ ಸಂಬಂಧಿತ ಕೆಲಸಗಾರರಿಗೆ ಆರೋಗ್ಯ ವಿಮೆಯೊಂದನ್ನು ಗುತ್ತಿಗೆದಾರರು ಒದಗಿಸಿದ್ದಾರೆ. ಆರ್ ಟಿ- ಪಿಸಿಆರ್ ಟೆಸ್ಟ್ ಗಾಗಿ ಪ್ರತ್ಯೇಕ ಸೌಕರ್ಯವೊಂದನ್ನು ಒದಗಿಸಲಾಗಿದೆ. ಕೆಲಸದ ಸ್ಥಳದಲ್ಲಿ ಐಸೊಲೇಷನ್, ವೈದ್ಯಕೀಯ ನೆರವನ್ನು ಒದಗಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಅಫಿಡವಿಟ್ ನಲ್ಲಿ ತಿಳಿಸಿದೆ.

ನವದೆಹಲಿಯಲ್ಲಿ ನಡೆಯುತ್ತಿರುವ ಸೆಂಟ್ರಲ್ ವಿಸ್ಟಾ ಯೋಜನೆ ನಿಲ್ಲಿಸುವಂತೆ ಅನ್ಯಾ ಮಲ್ಹೋತ್ರಾ ಸಲ್ಲಿಸಿರುವ ಸಾರ್ವಜನಿಕ
ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಮೇ 7 ರಂದು  ದೆಹಲಿ ಹೈಕೋರ್ಟ್ ಗೆ ಸೂಚಿಸಿತ್ತು. ಕಳೆದ ವರ್ಷ
ಡಿಸೆಂಬರ್ ನಲ್ಲಿ ಸೆಂಟ್ರಲ್ ವಿಸ್ತಾ ಅಭಿವೃದ್ಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com