ಆಗಸ್ಟ್-ಡಿಸೆಂಬರ್ ನಡುವೆ 216 ಕೋಟಿ ಕೋವಿಡ್ ಲಸಿಕೆ ಎಲ್ಲರಿಗೂ ಆಗುವಷ್ಟು ಲಭ್ಯ: ಕೇಂದ್ರ
ನವದೆಹಲಿ: ಕೋವಿಡ್-19 ಲಸಿಕೆ ಅಭಾವ ಎದುರಾಗಿದ್ದು, ಆಗಸ್ಟ್-ಡಿಸೆಂಬರ್ ನಡುವೆ 216 ಕೋಟಿ ಕೋವಿಡ್-19 ಲಸಿಕೆ ತಯಾರಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇಡೀ ಜನಸಂಖ್ಯೆಗೆ ನೀಡಬಹುದಾದಷ್ಟು ಲಸಿಕೆ 5 ತಿಂಗಳ ಅವಧಿಯಲ್ಲಿ ಉತ್ಪಾದನೆಯಾಗಲಿದೆ ಎಂದು ನೀತಿ ಆಯೋಗದ ಸದಸ್ಯರು, ಕೋವಿಡ್-19 ಕಾರ್ಯಪಡೆಯ ಮುಖ್ಯಸ್ಥರೂ ಆಗಿರುವ ವಿ.ಕೆ ಪೌಲ್ ಮಾಹಿತಿ ನೀಡಿದ್ದಾರೆ.
ರಷ್ಯಾದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್-19 ವಿರುದ್ಧದದ್ ಲಸಿಕೆ ಸ್ಪುಟ್ನಿಕ್ V ಮುಂದಿನ ವಾರದಲ್ಲಿ ಲಭ್ಯವಾಗಲಿದೆ ಎಂದೂ ಪೌಲ್ ಮಾಹಿತಿ ನೀಡಿದ್ದಾರೆ.
ಇನ್ನು ದೇಶೀಯವಾಗಿ ಬೇಡಿಕೆ ಹೆಚ್ಚಿದ್ದು ಪೂರೈಕೆ ಕುಸಿದಿರುವ ಪರಿಣಾಮವಾಗಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ದೆಹಲಿ ಮುಂತಾದ ಕೇಂದ್ರಾಡಳಿತ ಪ್ರದೇಶಗಳು ಕೋವಿಡ್-19 ಲಸಿಕೆಗಳನ್ನು ಖರೀದಿಸಲು ಜಾಗತಿಕ ಟೆಂಡರ್ ಗಳ ಮೊರೆ ಹೋಗಿವೆ.
ಲಸಿಕೆ ಅಭಾವವನ್ನು ಒಪ್ಪಿಕೊಂಡಿರುವ ಪೌಲ್, ಲಸಿಕೆಗಳು ಬಹು ಮುಖ್ಯ, ಆದರೆ ಅದನ್ನು ತಯಾರಿಸುವುದಕ್ಕೆ, ಲಭ್ಯವಾಗುವಂತೆ ಮಾಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ, ಪೂರೈಕೆ ಸೀಮಿತವಿರುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದ್ದರಿಂದಲೇ ಆದ್ಯತೆಯ ಗುಂಪಿಗೆ ಮೊದಲು ಲಸಿಕೆ ನೀಡಿ, ಕೋವಿಡ್-19 ಸೋಂಕಿಗೆ ದುರ್ಬಲ ವಯಸ್ಸಿನ ಗುಂಪುಗಳ ಮೇಲೆ ಗಮನ ಕೇಂದ್ರೀಕೃತಗೊಳಿಸಲಾಗಿತ್ತು ಎಂದು ಹೇಳಿದ್ದಾರೆ.
ವರ್ಷಾಂತ್ಯದ ವೇಳೆಗೆ ಇಡೀ ದೇಶದ ಜನಸಂಖ್ಯೆಗೆ ಆಗುವಷ್ಟು ಲಸಿಕೆ ಲಭ್ಯವಿರಲಿದೆ. ಮುಂದಿನ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ ಮೂರು ಬಿಲಿಯನ್ ನಷ್ಟು ಲಸಿಕೆ ಲಭ್ಯವಿರಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ