ಭೋಪಾಲ್ ಅನಿಲ ದುರಂತದ ಕುರಿತು ಎಚ್ಚರಿಸಿದ್ದ ಪತ್ರಕರ್ತ ಕೇಶ್ವಾನಿ ನಿಧನ

1984ರ ಭೋಪಾಲ್ ಅನಿಲ ದುರಂತದ ಕುರಿತು ಮೊದಲೇ ಎಚ್ಚರಿಸಿದ್ದ ಹಿರಿಯ ಪತ್ರಕರ್ತ ರಾಜ್ ಕುಮಾರ್ ಕೇಶ್ವಾನಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ ಕುಮಾರ್ ಕೇಶ್ವಾನಿ
ರಾಜ್ ಕುಮಾರ್ ಕೇಶ್ವಾನಿ

ಭೋಪಾಲ್: 1984ರ ಭೋಪಾಲ್ ಅನಿಲ ದುರಂತದ ಕುರಿತು ಮೊದಲೇ ಎಚ್ಚರಿಸಿದ್ದ ಹಿರಿಯ ಪತ್ರಕರ್ತ ರಾಜ್ ಕುಮಾರ್ ಕೇಶ್ವಾನಿ ಕೋವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ಕೇಶ್ವಾನಿ ಚೇತರಿಸಿಕೊಂಡಿದ್ದರು, ಆ ಬಳಿಕ ದೇಹದಲ್ಲಿ ಉಂಟಾಗಿದ್ದ ಕೋವಿಡೋತ್ತರ ಅನಾರೋಗ್ಯ ಸಮಸ್ಯೆಗಳಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. 72 ವರ್ಷದ ಕೇಶ್ವಾನಿ ಓರ್ವ ಮಗ ಮತ್ತು ಪತ್ನಿಯನ್ನು ಅಗಲಿದ್ದಾರೆ. 

ಕೇಶ್ವಾನಿ ಇದೇ ಏಪ್ರಿಲ್ 8ರಂದು ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಏಪ್ರಿಲ್ 20ರಂದು ಕೋವಿಡ್ ಗುಣಮುಖರಾಗಿದ್ದರು. ಆದರೆ ಬಳಿಕ ಶ್ವಾಸಕೋಶದ ತೊಂದರೆಯಿಂದಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆದು ಡಿಸ್ಚಾರ್ಜ್ ಆಗಿದ್ದರು. ಆದರೆ ನಿನ್ನೆ ಇತರೆ ಅನಾರೋಗ್ಯ ಸಮಸ್ಯೆಗಳಿಂದಾಗಿ  ಸಾವನ್ನಪ್ಪಿದ್ದಾರೆ ಎಂದು ಅವರ ಪುತ್ರ ರೌನಾಕ್ ಹೇಳಿದ್ದಾರೆ.

ಇನ್ನು ಕೇಶ್ವಾನಿ ಕಾಲೇಜು ವಿದ್ಯಾಭ್ಯಾಸದ ಸಂದರ್ಭದಲ್ಲೇ ಕ್ರೀಡಾ ವಿಭಾಗದ ಉಪ ಸಂಪಾದರಾಗಿ ಸೇವೆ ಸಲ್ಲಿಸುತ್ತಿದ್ದರು. ಬಳಿಕ ನ್ಯೂಯಾರ್ಕ್ ಟೈಮ್ಸ್, ಎನ್ ಡಿಟಿವಿ, ದೈನಿಕ್ ಭಾಸ್ಕರ್, ದಿ ಇಲ್ಯುಸ್ಟ್ರೇಟೆಡ್ ವೀಕ್ಲೀ ಆಫ್ ಇಂಡಿಯಾ, ಸಂಡೇ, ಇಂಡಿಯಾ ಟುಡೇ ಮತ್ತು ದಿ ವೀಕ್ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.  ಅಲ್ಲದೆ ಮುಘಲ್ ಇ ಅಜಮ್ ನಂತಹ ಸಾಹಿತ್ಯ ಬರಹಕ್ಕೆ 1985ರಲ್ಲಿ ಪ್ರತಿಷ್ಠಿತ ಬಿಡಿ ಗೋಯಂಕಾ ಪ್ರಶಸ್ತಿ ಪಡೆದಿದ್ದರು. 2010ರಲ್ಲಿ ಪ್ರೇಮ್ ಭಾಟಿಯಾ ಪತ್ರಿಕೋದ್ಯಮ ಪ್ರಶಸ್ತಿಗೂ ಪಾತ್ರರಾಗಿದ್ದರು.

ಕೇಶ್ವಾನಿ ನಿಧನಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣಿ ಸಂತಾಪ
ಇನ್ನು ಪತ್ರಕರ್ತ ಕೇಶ್ವಾನಿ ನಿಧನಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣಿ ಸಂತಾಪ ಸೂಚಿಸಿದ್ದು, 'ಭೋಪಾಲ್ ಅನಿಲ ದುರಂತ ಸಂಭವಿಸುವ ತಿಂಗಳಗಳ ಮೊದಲೇ ಆ ಸಂಸ್ಥೆಯಲ್ಲಿ ಭದ್ರತಾ ಕೊರತೆಗಳ ಬಗ್ಗೆ ಕೇಶ್ವಾನಿ ತಮ್ಮ ವರದಿಗಳ ಮೂಲಕ ಗಮನ ಸೆಳೆದು ಹೆಸರುವಾಸಿಯಾಗಿದ್ದರು ಎಂದು ಹೇಳಿದ್ದಾರೆ.

ಭೋಪಾಲ್ ಅನಿಲ ದುರಂತದ ಕುರಿತು ಮೊದಲೇ ಎಚ್ಚರಿಸಿದ್ದ ಪತ್ರಕರ್ತ
ಇನ್ನು 1984 ಡಿಸೆಂಬರ್ 2 ಮತ್ತು 3 ನಡುವಿನ ರಾತ್ರಿಯಲ್ಲಿ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಕೀಟನಾಶಕ ಘಟಕದಲ್ಲಿ ಸಂಭವಿಸಿದ್ದ ಅನಿಲ ಸೋರಿಕೆ ದುರಂತದಿಂದಾಗಿ ಸಾವಿರಾರು ಮಂದಿ ಸಾವಿಗೀಡಾಗಿದ್ದರು. ಆದರೆ ಈ ದುರಂತದ ಕುರಿತು ಇದೇ ಹಿರಿಯ ಪತ್ರಕರ್ತರಾಜ್  ಕುಮಾರ್ ಕೇಶ್ವಾನಿ ಸರ್ಕಾರವನ್ನು ಎಚ್ಚರಿಸಿದ್ದರು. ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಅಕ್ರಮಗಳನ್ನು ಕೇಶ್ವಾನಿ ಬಯಲಿಗೆಳೆದಿದ್ದರು. 

ಭೋಪಾಲ್ ಅನಿಲ ದುರಂತ
ಮಧ್ಯಪ್ರದೇಶದ ರಾಜಧಾನಿಯ ಯೂನಿಯನ್ ಕಾರ್ಬೈಡ್ ಪೆಸ್ಟಿಸೈಡ್ ಘಟಕದಲ್ಲಿ 1984ರ ಡಿಸೆಂಬರ್ 2ರ ಮಧ್ಯರಾತ್ರಿ 30 ಟನ್ನುಗಳಿಗೂ ಅಧಿಕ ಪ್ರಮಾಣದ ಮಿಥೈಲ್ ಐಸೋಸೈನೇಟ್ ಅನಿಲ ಸೋರಿಕೆಯಾಯಿತು. ಈ ಘೋರ ದುರಂತದಲ್ಲಿ 15,000ಕ್ಕೂ ಹೆಚ್ಚು ಮಂದಿ ಬಲಿಯಾಗಿ. ಸುಮಾರು ಆರು ಲಕ್ಷ ಮಂದಿ  ದುಷ್ಪರಿಣಾಮಕ್ಕೆ ಒಳಗಾದರು. ಈ ದುರಂತದಲ್ಲಿ ಬದುಕಿಳಿದ ಅನೇಕ ಮಂದಿ ಈಗಲೂ ಉಸಿರಾಟದ ತೊಂದರೆ, ಹಾಗೂ ವಿವಿಧ ಅಂಗ ಹಾನಿಯಿಂದ ಬಳಲುತ್ತಿದ್ದಾರೆ. 1919ರ ನಂತರದ ವಿಶ್ವದ ಅತ್ಯಂತ ಭೀಕರ ಕೈಗಾರಿಕಾ ದುರ್ಘಟನೆಗಳಲ್ಲಿ ಭೋಪಾಲ್ ಅನಿಲ ದುರಂತ ಕೂಡ ಒಂದು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com