ಬಂಗಾಳ ರಾಜ್ಯಪಾಲ ಧಂಕರ್ ವಿರುದ್ಧ ದೂರು ನೀಡಿ, ಅವರ ಅವಧಿ ಮುಗಿದ ನಂತರ ಕ್ರಮ ಜರುಗಿಸಬಹುದು: ಟಿಎಂಸಿ ಸಂಸದ
ಪಶ್ಚಿಮ ಬಂಗಾಳ ರಾಜ್ಯಪಾಲ ಮತ್ತು ಟಿಎಂಸಿ ಸರ್ಕಾರದ ನಡುವಿನ ಸಂಘರ್ಷ ಮುಂದುವರೆದಿದ್ದು, ರಾಜ್ಯಪಾಲ ಜಗದೀಶ್ ಧಂಕರ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿ....
Published: 24th May 2021 01:46 PM | Last Updated: 24th May 2021 01:46 PM | A+A A-

ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್
ಕೋಲ್ಕತಾ: ಪಶ್ಚಿಮ ಬಂಗಾಳ ರಾಜ್ಯಪಾಲ ಮತ್ತು ಟಿಎಂಸಿ ಸರ್ಕಾರದ ನಡುವಿನ ಸಂಘರ್ಷ ಮುಂದುವರೆದಿದ್ದು, ರಾಜ್ಯಪಾಲ ಜಗದೀಶ್ ಧಂಕರ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿ, ಅವಧಿ ಮುಗಿದ ನಂತರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಜನರಿಗೆ ಕರೆ ನೀಡಿದ್ದಾರೆ.
ಭಾನುವಾರ ಮಾಧ್ಯಮ ಸಿಬ್ಬಂದಿಯೊಂದಿಗೆ ಮಾತನಾಡಿದ ಬ್ಯಾನರ್ಜಿ, ಪಶ್ಚಿಮ ಬಂಗಾಳ ರಾಜ್ಯಪಾಲರು ಈ ಪ್ರಕರಣವನ್ನು (ನಾರದ) ನೇರವಾಗಿ ಸಿಬಿಐಗೆ ವರ್ಗಾಯಿಸಿದ್ದಾರೆ, ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.
"ನಾವು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು ನಮಗೆ ತಿಳಿದಿದೆ. ರಾಜ್ಯಪಾಲರು ಅಪರಾಧಗಳು ಮತ್ತು ಹಿಂಸಾಚಾರವನ್ನು ಪ್ರಚೋದಿಸುವಲ್ಲೆಲ್ಲಾ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸುವಂತೆ ನಾವು ಜನರನ್ನು ಒತ್ತಾಯಿಸುತ್ತಿದ್ದೇವೆ" ಎಂದು ಬ್ಯಾನರ್ಜಿ ಹೇಳಿದರು.
ಧಂಕರ್ ಅವರ ರಾಜ್ಯಪಾಲರ ಅವಧಿ ಮುಗಿದ ನಂತರ, ಜನರು ಸಲ್ಲಿಸಿದ ದೂರುಗಳ ಆಧಾರದ ಮೇಲೆ ಅವರನ್ನು ವಿಚಾರಣೆಗೆ ಒಳಪಡಿಸಬಹುದು ಮತ್ತು ನಾರದ ಹಗರಣ ಸಂಬಂಧ ಟಿಎಂಸಿ ಶಾಸಕರನ್ನು ಇರಿಸಿದ್ದ ಅದೇ ಪ್ರೆಸಿಡೆನ್ಸಿ ಜೈಲಿಗೆ ಕಳುಹಿಸಲಾಗುವುದು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಇನ್ನು ಟಿಎಂಸಿ ಸಂಸದರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಧಂಕರ್ ಅವರು, ಅವರು ಒಬ್ಬ ಹಿರಿಯ ಸಂಸದರು, ಹಿರಿಯ ವಕೀಲರಾಗಿದ್ದು, ಅವರ ಹೇಳಿಕೆ ನೋಡಿ ದಿಗ್ಭ್ರಮೆಯಾಗಿದೆ. ಆದರೆ ಈ ವಿಚಾರವನ್ನು ಪಶ್ಚಿಮ ಬಂಗಾಳದ ಸುಸಂಸ್ಕೃತ ಜನರು ಮತ್ತು ಮಾಧ್ಯಮಗಳ ವಿವೇಚನೆಗೆ ಬಿಡುತ್ತೇನೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ.