ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಯಾವುದೇ ರೀತಿಯ ನೆರವಿಗೂ ಸೇನೆ ಸಿದ್ಧ: ಜನರಲ್ ಬಿಪಿನ್ ರಾವತ್

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಯಾವುದೇ ರೀತಿಯ ನೆರವಿಗೂ ಭಾರತೀಯ ಸೇನೆ ಸಿದ್ಧ ಎಂದು ಸೇನಾಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಹೇಳಿದ್ದಾರೆ.
ಬಿಪಿನ್ ರಾವತ್
ಬಿಪಿನ್ ರಾವತ್

ನವದೆಹಲಿ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಯಾವುದೇ ರೀತಿಯ ನೆರವಿಗೂ ಭಾರತೀಯ ಸೇನೆ ಸಿದ್ಧ ಎಂದು ಸೇನಾಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಹೇಳಿದ್ದಾರೆ.

ಮಾರಕ ಕೊರೋನಾ ವೈರಸ್ ನ ಅಬ್ಬರ ದೇಶದಲ್ಲಿ ಮುಂದುವರೆದಿದ್ದು, ಸೋಂಕು ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆಯಾದರೂ, ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಜಾಗತಿಕವಾಗಿ ಮೂರು ಲಕ್ಷ ಕೋವಿಡ್ ಸಾವು ಕಂಡ ಮೂರನೇ ದೇಶ ಎಂಬ ಕುಖ್ಯಾತಿಗೂ ಭಾರತ ಪಾತ್ರವಾಗಿದೆ. ಈ ಬೆಳವಣಿಗೆಗಳ  ನಡುವೆಯೇ ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಅವರು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಯಾವುದೇ ರೀತಿಯ ನೆರವಿಗೂ ಭಾರತೀಯ ಸೇನೆ ಸಿದ್ಧ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಸಾಮಾಜಿಕ ಸಂಘಟನೆಯೊಂದು ಆಯೋಜಿಸಿದ್ದ ವರ್ಚುವಲ್‌ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಕೋವಿಡ್‌ನಿಂದಾಗಿ ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು ಈ ಸಾಂಕ್ರಾಮಿಕ ಸೋಂಕನ್ನು ನಿಯಂತ್ರಿಸಲು ದೇಶದ ಜನರಿಗೆ ಅಗತ್ಯ  ನೆರವು ನೀಡಲು ಸೇನೆ ಸಿದ್ಧವಿದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಯಲು, ಜನರು ಒಟ್ಟಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಇದಕ್ಕಾಗಿ ಸೇನೆ ಮೂಲಕ ಅಗತ್ಯ ವೈದ್ಯಕೀಯ ಹಾಗೂ ಮೂಲ ಸೌಕರ್ಯಗಳ ನೆರವು ನೀಡಲಾಗುವುದು ಎಂದು ರಾವತ್‌ ಹೇಳಿದ್ದಾರೆ.

ಇನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ದತ್ತಾಂಶಗಳ ಪ್ರಕಾರ, ಭಾರತದಲ್ಲಿ ಭಾನುವಾರ 2.4 ಲಕ್ಷ ಹೊಸ ಕೋವಿಡ್-19 ಪ್ರಕರಣಗಳು ಮತ್ತು 3,741 ಸಾವುಗಳು ದಾಖಲಾಗಿವೆ. ಸೋಂಕಿನಲ್ಲಿ ಇಳಿಕೆ ಕಂಡುಬಂದರೂ ಸಾವಿನ ಪ್ರಮಾಣ ಆತಂಕ ಸೃಷ್ಟಿಸಿದೆ.  ಸತತ 7ನೇ ದಿನ ದೇಶದಲ್ಲಿ ದೈನಂದಿನ  ಸೋಂಕು ಪ್ರಕರಣಗಳ ಸಂಖ್ಯೆ 3ಲಕ್ಷಕ್ಕಿಂತ ಕಡಿಮೆ ಇದೆ. 

ಕಳೆದ ವಾರವಷ್ಟೇ ವರ್ಚುವಲ್ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಕೂಡ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಸೋಂಕು ಪ್ರಮಾಣ ಹೆಚ್ಚಳದ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೆ ಗ್ರಾಮೀಣ ಭಾಗಗದಲ್ಲಿ ಕೋವಿಡ್ ಸೋಂಕಿನ ಕುರಿತು ಹೆಚ್ಚೆಚ್ಚು ಅರಿವು ಮೂಡಿಸುವ ಅಗತ್ಯತೆ ಇದ್ದು, ಸೋಂಕು ತಗ್ಗಿಸಲು  ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com