ಅನಿಲ್‌ ದೇಶಮುಖ್
ಅನಿಲ್‌ ದೇಶಮುಖ್

ಅಕ್ರಮ ಹಣ ವರ್ಗಾವಣೆ ಪ್ರಕರಣ: ಇಡಿ ಅಧಿಕಾರಿಗಳಿಂದ ಮಾಜಿ ಸಚಿವ ಅನಿಲ್ ದೇಶ್‌ಮುಖ್‌ ಬಂಧನ

ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್‌ ಅವರನ್ನು ಸೋಮವಾರ ತಡರಾತ್ರಿ ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿದೆ.

ಮುಂಬಯಿ: ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್‌ ಅವರನ್ನು ಸೋಮವಾರ ತಡರಾತ್ರಿ ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿದೆ.

71 ವರ್ಷದ ದೇಶ್‌ಮುಖ್‌ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಬಂಧನಕ್ಕೂ ಮುನ್ನ ಅವರು 12 ಗಂಟೆಗಳ ವಿಚಾರಣೆ ಎದುರಿಸಿದರು.

ವಿಚಾರಣೆಗೆ ತೆರಳುವ ಮುನ್ನ ವಿಡಿಯೊ ಸಂದೇಶ ಬಿಡುಗಡೆ ಮಾಡಿದ್ದ ದೇಶ್‌ಮುಖ್ ಅವರು, ‘ತನಿಖೆಗೆ ಸಹಕರಿಸುತ್ತಿಲ್ಲ ಎಂಬ ವರದಿಗಳಿಗೆ ಆಧಾರವಿಲ್ಲ. ಹಿಂದೆಯೂ ಸಿಬಿಐ ಅಧಿಕಾರಿಗಳ ಎದುರು ಎರಡು ಬಾರಿ ಹಾಜರಾಗಿದ್ದೆ. ನನ್ನ ಅರ್ಜಿ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ. ಅದಕ್ಕೆ ಇನ್ನಷ್ಟು ಸಮಯ ತಗಲುವ ಕಾರಣ ಈಗ ಸ್ವಯಂಪ್ರೇರಿತವಾಗಿ ವಿಚಾರಣೆಗೆ ತೆರಳುತ್ತಿದ್ದೇನೆ’ ಎಂದು ಹೇಳಿದ್ದರು.

ಎನ್‌ಸಿಪಿ ಮುಖಂಡ ದೇಶಮುಖ್‌ ಅವರು ವಿಚಾರಣೆಯ ವೇಳೆ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೆ ನುಣಿಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎಂದಿರುವ ಅಧಿಕಾರಿಗಳು, ಅವರನ್ನು ಇಂದು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ. ಕೋರ್ಟ್‌ನಲ್ಲಿ ಇ.ಡಿ. ದೇಶಮುಖ್‌ ಅವರನ್ನು ತನ್ನ ವಶಕ್ಕೆ ಪಡೆಯಲು ಅನುಮತಿ ಕೋರಲಿದೆ.

ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಸೋಮವಾರ ಎದುರು ವಿಚಾರಣೆಗೆ ಹಾಜರಾದರು. ಈ ಹಿಂದೆ ಐದು ಬಾರಿ ಸಮನ್ಸ್‌ ಜಾರಿಯಾಗಿದ್ದರೂ ಅವರು ವಿಚಾರಣೆಗೆ ಗೈರು ಹಾಜರಾಗಿದ್ದರು. ದೇಶ್‌ಮುಖ್‌ ಅವರು ದಕ್ಷಿಣ ಮುಂಬೈನ ಬಲ್ಲಾರ್ಡ್‌ ಎಸ್ಟೇಟ್‌ ಪ್ರದೇಶದಲ್ಲಿರುವ ಇ.ಡಿ ಕಚೇರಿಗೆ ಬೆಳಿಗ್ಗೆ 11.40ರ ವೇಳೆಗೆ ತಮ್ಮ ವಕೀಲರು, ಅವರ ಸಹಾಯಕರ ಜೊತೆಗೆ ಹಾಜರಾದರು. ಸಮನ್ಸ್‌ ರದ್ದುಪಡಿಸಲು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಕಳೆದ ವಾರ ತಿರಸ್ಕರಿಸಿತ್ತು.

ಪೊಲೀಸ್‌ ಇಲಾಖೆಯಲ್ಲಿ ₹100 ಕೋಟಿ ಲಂಚ ವಸೂಲಿ, ಸುಲಿಯ ಕುರಿತು ಮುಂಬೈ ಪೊಲೀಸ್‌ ಕಮಿಷನರ್‌ ಪರಮ್‌ಬೀರ್‌ ಸಿಂಗ್‌ ಅವರು ದೇಶ್‌ಮುಖ್ ಅವರ ಮೇಲೆ ಆರೋಪ ಮಾಡಿದ್ದರು. ಆ ಕುರಿತ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಕ್ರಿಮಿನಲ್‌ ವಿಚಾರಣೆ ನಡೆಸಲಾಗುತ್ತಿದೆ.

Related Stories

No stories found.

Advertisement

X
Kannada Prabha
www.kannadaprabha.com