ಅಧಿಕಾರದಲ್ಲಿದ್ದಾಗ ನನ್ನ ಮೇಲೇಕೆ ತನಿಖೆಗೆ ಆದೇಶಿಸಲಿಲ್ಲ?: ಫಡ್ನವೀಸ್'ಗೆ ನವಾಬ್ ಮಲಿಕ್ ತಿರುಗೇಟು
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಅವರು ಮಂಗಳವಾರ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಭೂಗತ ಜಗತ್ತಿನ ಸಂಪರ್ಕವಿರುವ ಬಗ್ಗೆ ತಿಳಿದಿದ್ದರೆ ಅಧಿಕಾರದಲ್ಲಿದ್ದಾಗ ಏಕೆ ಫಡ್ನವೀಸ್ ನನ್ನ ವಿರುದ್ಧ ತನಿಖೆಗೆ ಆದೇಶಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
Published: 02nd November 2021 01:12 PM | Last Updated: 02nd November 2021 01:15 PM | A+A A-

ಮಹಾರಾಷ್ಟ್ರ ಮಾಜಿ ಸಿಎಂ ಫಡ್ನವೀಸ್ ಹಾಗೂ ನವಾಬ್ ಮಲಿಕ್
ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಅವರು ಮಂಗಳವಾರ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಭೂಗತ ಜಗತ್ತಿನ ಸಂಪರ್ಕವಿರುವ ಬಗ್ಗೆ ತಿಳಿದಿದ್ದರೆ ಅಧಿಕಾರದಲ್ಲಿದ್ದಾಗ ಏಕೆ ಫಡ್ನವೀಸ್ ನನ್ನ ವಿರುದ್ಧ ತನಿಖೆಗೆ ಆದೇಶಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನವಾಬ್ ಮಲಿಕ್, ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು ಮತ್ತು ಗೃಹ ಖಾತೆಯನ್ನು ಹೊಂದಿದ್ದರು. ನನಗೆ ಭೂಗತ ಜಗತ್ತಿನೊಂದಿಗೆ ಸಂಪರ್ಕವಿದೆ ಎಂದು ಅವರು ಭಾವಿಸಿದ್ದೇ ಆದರೆ, ನನ್ನ ವಿರುದ್ಧವೇಕೆ ಅವರು ತನಿಖೆಗೆ ಆದೇಶಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಳಿಕ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಕುರಿತಂತೆಯೂ ವಾಗ್ದಾಳಿ ನಡೆಸಿದ ಅವರು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಲಯ ನಿರ್ದೇಶಕರು ಕೋಟಿಗಟ್ಟಲೆ ಸುಲಿಗೆ ಮಾಡಿದ್ದಾರೆ ಮತ್ತು ಪ್ರಾಮಾಣಿಕ ಅಧಿಕಾರಿಯ ವ್ಯಾಪ್ತಿಯನ್ನು ಮೀರಿ ದುಬಾರಿ ಬಟ್ಟೆಗಳನ್ನು ಬಳಕೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಜನರ ಬಳಿ ಕೋಟಿಗಟ್ಟಲೆ ಹಣವನ್ನು ಸುಲಿಗೆ ಮಾಡಿ, ರೂ.70,000ದ ಶರ್ಟ್, ರೂ.25-50 ಲಕ್ಷದ ಕೈ ಗಡಿಯಾರಗಳನ್ನು ಧರಿಸುತ್ತಾರೆ. ಒಬ್ಬ ಪ್ರಾಮಾಣಿಕ ಅಧಿಕಾರಿ ಇಷ್ಟೊಂದು ದುಬಾರಿ ವೆಚ್ಚದ ಬಟ್ಟೆ ಹಾಗೂ ವಸ್ತುಗಳನ್ನು ಬಳಕ ಮಾಡಲು ಹೇಗೆ ಸಾಧ್ಯ. ಇಲ್ಲಸಲ್ಲದ ಪ್ರಕರಣಗಳನ್ನು ಹೂಡಿ ಸಮೀರ್ ಜನರಿಂಗ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ಜೆಎನ್‌ಪಿಟಿಯಲ್ಲಿ ಡ್ರಗ್ಸ್ ಇರುವ ಮೂರು ಕಂಟೈನರ್‌ಗಳಿವೆ ಎಂದು ಮಲಿಕ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಕಂದಾಯ ಗುಪ್ತಚರ ಇಲಾಖೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ನವಾಬ್ ಮಲಿಕ್ ಅವರು, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಹಾಗೂ ಅವರ ಪತ್ನಿ ಅಮೃತಾ ಅವರಿಗೆ ಡ್ರಗ್ ಪೆಡ್ಲರ್ ಜೈದೀಪ್ ರಾಣಾ ಜೊತೆಗೆ ಸಂಬಂಧವಿದೆ ಎಂದು ಹೇಳಿದ್ದರು.
ಇದಕ್ಕೆ ಸ್ಪಷ್ಟನೆ ನೀಡಿದ್ದ ಫಡ್ನವೀಸ್ ಅವರು, ನವಾಬ್ ಮಲಿಕ್ ಅನಗತ್ಯವಾಗಿ ಡ್ರಗ್ಸ್ ಕೇಸ್ನಲ್ಲಿ ನನ್ನ ಮತ್ತು ಪತ್ನಿ ಅಮೃತಾಳ ಹೆಸರನ್ನು ಎಳೆದುತಂದಿದ್ದಾರೆ. ಇದು ಆಧಾರ ರಹಿತವಾದ ಆರೋಪ. ಆದರೇನು ಈಗ ನವಾಬ್ ಮಲಿಕ್ ಆಟ ಶುರು ಮಾಡಿದ್ದಾರೆ..ಪಟಾಕಿ ಹಚ್ಚಿದ್ದಾರೆ. ಇದಕ್ಕೊಂದು ಲಾಜಿಕಲ್ ಅಂತ್ಯವನ್ನು ನಾನು ಕೊಡುತ್ತೇನೆ. ದೀಪಾವಳಿಯ ನಂತರ ನಾನು ಬಾಂಬ್ ಸ್ಫೋಟಿಸುತ್ತೇನೆ ಎಂದು ಹೇಳಿದ್ದರು.
ಮುಂಬೈ ಭೂಗತ ಜಗತ್ತಿಗೂ, ನವಾಬ್ ಮಲಿಕ್ಗೂ ಇರುವ ಸಂಪರ್ಕವನ್ನು ನಾನು ಸಾರ್ವಜನಿಕರ ಎದುರು, ದಾಖಲೆ ಸಮೇತ ಪ್ರಸ್ತುತ ಪಡಿಸುತ್ತೇನೆಂದು ತಿಳಿಸಿದ್ದರು.
ಈ ಜೈದೀಪ್ ರಾಣಾನೊಂದಿಗೆ ಫೋಟೋ ತೆಗೆಸಿಕೊಂಡಾಕ್ಷಣ ಅವನೊಂದಿಗೆ ಸಂಬಂಧ ಇದೆ ಎಂದು ಭಾವಿಸಬೇಕಾಗಿಲ್ಲ. ನದಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ತಂಡವೊಂದು ನಮ್ಮನ್ನು ಭೇಟಿಯಾಗಿತ್ತು. ಆಗ ತೆಗೆಸಿಕೊಂಡ ಫೋಟೋ ಇದಾಗಿದೆ. ಆ ತಂಡದೊಂದಿಗೆ ಇರುವವರೆಲ್ಲರೊಂದಿಗೂ ಫೋಟೋ ಇದೆ. ಆದರೆ ಈ ಫೋಟೋವನ್ನಷ್ಟೇ ಹಾಕುವ ಮೂಲಕ ನವಾಬ್ ಮಲಿಕ್ ಬೇರೇನೋ ಹೇಳಲು ಹೊರಟಿದ್ದಾರೆ ಹೇಳಿದ್ದರು.