"ಭಯದಿಂದಾಗಿ ತೈಲ ಬೆಲೆ ಇಳಿಕೆ": ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಹಲವು ದಿನಗಳಿಂದ ವಾಗ್ದಾಳಿ ನಡೆಸುತ್ತಾ ಬಂದಿದೆ. ಗಗನಮುಖಿಯಾಗಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹಾಗೂ ಹಣದುಬ್ಬರದ ವಿರುದ್ಧ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ...
Published: 04th November 2021 05:12 PM | Last Updated: 04th November 2021 05:14 PM | A+A A-

ಪ್ರಿಯಾಂಕಾ ಗಾಂಧಿ
ನವದೆಹಲಿ: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಹಲವು ದಿನಗಳಿಂದ ವಾಗ್ದಾಳಿ ನಡೆಸುತ್ತಾ ಬಂದಿದೆ. ಗಗನಮುಖಿಯಾಗಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹಾಗೂ ಹಣದುಬ್ಬರದ ವಿರುದ್ಧ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರಾ ಅವರು ಟೀಕಿಸುತ್ತಲೇ ಬಂದಿದ್ದಾರೆ.
ಬೆಲೆ ಏರಿಕೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ. ಇದರಿಂದ ಸಾಮಾನ್ಯರ ಜೀವನ ಸಂಕಷ್ಟಕ್ಕೆ ತಿರುಗಿದೆ ಎಂದು ವಾಗ್ದಾಳಿ ನಡೆಸಿದ್ದರು.
ಇದನ್ನು ಓದಿ: ದೇಶದ ಜನತೆಗೆ ದೀಪಾವಳಿ ಗಿಫ್ಟ್: ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 5 ರೂ., ಡೀಸೆಲ್ ಮೇಲೆ 10 ರೂ. ಕಡಿತ
ಈ ಮಧ್ಯೆ ಕೇಂದ್ರ ಸರ್ಕಾರ ತೈಲ ಬೆಲೆ ಇಳಿಕೆ ಮಾಡಿದೆ. ಕೇಂದ್ರ ಸರ್ಕಾರದ ಪೆಟ್ರೋಲ್ ಬೆಲೆ ಇಳಿಕೆಯ ನಂತರ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದು, "ತೈಲ ಬೆಲೆ ಇಳಿಕೆ ಮಾಡಿದ್ದು, ಹೃದಯದಿಂದ ಅಲ್ಲ. ಬದಲಾಗಿ ಭಯದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಲೂಟಿಕೋರ ಸರ್ಕಾರಕ್ಕೆ ಚುನಾವಣೆಯಲ್ಲಿ ಉತ್ತರ ನೀಡಬೇಕಾಗಿದೆ" ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರದ ಬೆಲೆ ಏರಿಕೆ ನೀತಿ ವಿರುದ್ಧ ನಿನ್ನೆಯೂ ಮಾತನಾಡಿದ್ದ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ, "ಇದು ಹಬ್ಬಗಳ ಸಮಯ. ಬೆಲೆ ಹೆಚ್ಚಳದಿಂದ ಸಾಮಾನ್ಯ ನಾಗರಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಲೂಟಿ ಆಲೋಚನೆಗಳಿಂದ ಹಬ್ಬದ ಸಮಯದಲ್ಲಿ ಪೆಟ್ರೋಲ್-ಡೀಸೆಲ್, ಸಿಲಿಂಡರ್, ದಿನಸಿ ವಸ್ತುಗಳ ಬೆಲೆ ಕಡಿಮೆ ಮಾಡುವ ಬದಲು ಹೆಚ್ಚಳ ಮಾಡುವಲ್ಲಿ ಸಫಲವಾಗಿದೆ. ಚುನಾವಣೆ ಸಂದರ್ಭದಲ್ಲಿ 2-3 ರೂಪಾಯಿ ಕಡಿಮೆ ಮಾಡಿ ಜನ ಸಾಮಾನ್ಯರ ಮಧ್ಯೆ ಹೋಗಲು ಪ್ಲಾನ್ ಮಾಡಿಕೊಂಡಿದೆ" ಎಂದು ನಿನ್ನೆ ಪ್ರಧಾನಿ ಮೋದಿಯನ್ನು ಗುರಿಯಾಗಿರಿಸಿಕೊಂಡು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದರು.
ये दिल से नहीं डर से निकला फैसला है।
— Priyanka Gandhi Vadra (@priyankagandhi) November 4, 2021
वसूली सरकार की लूट को आने वाले चुनाव में जवाब देना है।#PetrolDieselPrice