ಡಿ - ಗ್ಯಾಂಗ್‌ ಜತೆ ಫಡ್ನವಿಸ್‌ ಭೂಗತ ನಂಟು ನಾಳೆ ಬಹಿರಂಗ: ನವಾಬ್‌ ಮಲಿಕ್‌ ತಿರುಗೇಟು

ಶಾರುಖ್ ಖಾನ್ ಪುತ್ರನ ಡ್ರಗ್ ಕೇಸ್ ವಿಚಾರ ಮಹಾರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಸಚಿವ ನವಾಬ್ ಮಲಿಕ್ ನಡುವೆ ಜಟಾಪಟಿ ತೀವ್ರಗೊಂಡಿದೆ.
ನವಾಬ್ ಮಲಿಕ್ - ದೇವೇಂದ್ರ ಫಡ್ನವಿಸ್
ನವಾಬ್ ಮಲಿಕ್ - ದೇವೇಂದ್ರ ಫಡ್ನವಿಸ್

ಮುಂಬೈ: ಬಾಲಿವುಡ್ ಸೂಪರ್‌ ಸ್ಟಾರ್‌ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಆರೋಪಿಯಾಗಿರುವ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ ದಿನ ದಿನಕ್ಕೂ ರಾಜಕೀಯ ವಿವಾದಕ್ಕೆ ಎಡೆಮಾಡಿಕೊಡುತ್ತಿದೆ. ಪ್ರಕರಣದಲ್ಲಿ ಪ್ರತಿಪಕ್ಷ ಬಿಜೆಪಿ ಹಾಗೂ ಶಿವಸೇನೆ- ಎನ್‌ಸಿಪಿ ರಾಜ್ಯ ಸರ್ಕಾರದ ನಡುವಣ ಸಮರ ತಾರಕಕ್ಕೇರಿದೆ. ತಮ್ಮ ವಿರುದ್ದ ಸಂಚಲನ ಆರೋಪ ಮಾಡಿರುವ ಪ್ರತಿ ಪಕ್ಷ ನಾಯಕ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ಅಷ್ಟೆ ಗಂಭೀರ ಸ್ವರೂಪದ ಪ್ರತ್ಯಾರೋಪದ ಮೂಲಕ ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ತಿರುಗೇಟು ನೀಡಿದ್ದಾರೆ.

ನಾಳೆ(ಬುಧವಾರ) ಹೈಡ್ರೋಜನ್ ಬಾಂಬ್ ಸ್ಪೋಟಿಸಲಿರುವೆ... ಡಿ-ಗ್ಯಾಂಗ್ ಜೊತೆ ಅವರಿಗೆ ಇರುವ ಭೂಗತ ಲೋಕದ ಸಂಪರ್ಕವನ್ನು ಬಹಿರಂಗಪಡಿಸುವುದಾಗಿ ನವಾಬ್ ಮಲಿಕ್ ಅವರು ಹೇಳಿದ್ದಾರೆ.

ಫಡ್ನವೀಸ್‌ ಮಾಡಿರುವ ಹೊಸ ಆರೋಪಗಳ ಸಂಬಂಧ ಯಾವುದೇ ತನಿಖೆಗೆ ತಾವು ಸಿದ್ದ ಎಂದು ನವಾಬ್‌ ಮಲಿಕ್‌ ಪ್ರತಿ ಸವಾಲು ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಎನ್‌ಸಿಬಿ ಮುಂಬೈ ವಲಯ ಮುಖ್ಯ ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಇತ್ತೀಚಿನ ದಿನಗಳಲ್ಲಿ ಗುರಿಯಾಗಿಸಿಕೊಂಡಿರುವ ನವಾಬ್ ಮಲಿಕ್ ವಿರುದ್ದ ದೇವೇಂದ್ರ ಫಡ್ನವಿಸ್ ಗಂಭೀರ ಆರೋಪ ಮಾಡಿದ್ದಾರೆ. 

ನವಾಬ್‌ ಮಲಿಕ್‌ ಹಾಗೂ ಆತನ ಕುಟುಂಬದ ಸದಸ್ಯರು ದಾವೂದ್ ಗ್ಯಾಂಗ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದೆ ಎಂದು ಆರೋಪಿಸಿದ್ದಾರೆ. ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದಾವೂದ್ ಗ್ಯಾಂಗ್ ಸದಸ್ಯನ ನಡುವೆ ಭೂ ವ್ಯವಹಾರಕ್ಕೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಿರುವುದು ತೀವ್ರ ಕೋಲಾಹಲ ಸೃಷ್ಟಿಸಿದೆ.

ಮುಂಬೈ ಸ್ಫೋಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಿಂದ ನವಾಬ್ ಮಲಿಕ್ ಅಗ್ಗವಾಗಿ ಆಸ್ತಿಗಳನ್ನು ಖರೀದಿಸಿದ್ದಾರೆ. ಅವರಿಂದ ಏಕೆ ಭೂಮಿ ಖರೀದಿಸಿದರು? ಎಂದು ಫಡ್ನವಿಸ್ ಪ್ರಶ್ನಿಸಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖಾ ಸಂಸ್ಥೆಗಳಿಗೂ ದೂರು ನೀಡುವುದಾಗಿ, ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೂ ದಾಖಲೆಗಳ ನೀಡುವುದಾಗಿ ಫಡ್ನವಿಸ್ ಘೋಷಿಸಿದ್ದಾರೆ.

ಮುಂಬೈನಲ್ಲಿ ನವಾಬ್ ಮಲಿಕ್ ಹಾಗೂ ಅವರ ಸಂಬಂಧಿಕರು ಖರೀದಿಸಿದ ಐದು ಜಮೀನುಗಳಲ್ಲಿ ನಾಲ್ಕು ನೇರವಾಗಿ ಭೂಗತ್ತ ಜಗತ್ತಿಗೆ ಸೇರಿದ್ದಾಗಿವೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಆರೋಪ ಮಾಡಿದ್ದಾರೆ.

ಇಂದು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಫಡ್ನವಿಸ್, ಇದು ರಾಷ್ಟ್ರದ ಅತ್ಯಂತ ಗಂಭೀರ ಮತ್ತು ಭದ್ರತೆಗೆ ಸಂಬಂಧಿಸಿದ ವಿಷಯವಾಗಿದೆ. ಅಂಡರ್ ವರ್ಲ್ಡ್ ನಂಟಿನ ವಿಚಾರದಲ್ಲಿ ಎರಡು ಪಾತ್ರಗಳು ಅತಿ ಮುಖ್ಯವಾಗಿವೆ. ಒಬ್ಬ 1993ರಲ್ಲಿನ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿರುವ ಭಯೋತ್ಪಾದಕ ಶಹಾ ವಾಲಿ ಅಲಿ ಖಾನ್ ಬಾಂಬ್ ಸ್ಫೋಟದ ಅಪರಾಧಿಯಾಗಿದ್ದು, ನ್ಯಾಯಾಲಯ ಖಾನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನೊಬ್ಬ ದಾವೂದ್ ಜೊತೆಗಿನ ಫೋಟೋದಲ್ಲಿ ಕಾಣಿಸಿಕೊಂಡಿರುವ ಸಲೀಂ ಪಟೇಲ್ ಎಂದು ಫಡ್ನವಿಸ್ ಹೇಳಿದ್ದಾರೆ.

ನವಾಬ್ ಮಲಿಕ್ ಅವರು ಸರ್ದಾರ್ ಶಾ ವಾಲಿ ಅಲಿ ಖಾನ್ ಮತ್ತು ಸಲೀಂ ಪಟೇಲ್ ಅವರೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದಾರೆ. ಇಬ್ಬರೂ ಕೋಟ್ಯಂತರ ಮೌಲ್ಯದ ಭೂಮಿಯನ್ನು ನವಾಬ್ ಮಲಿಕ್ ಅವರ ಸಂಬಂಧಿಯ ಕಂಪನಿಗೆ ಒಂದು ಪೈಸೆಗೆ ಮಾರಾಟ ಮಾಡಿದ್ದಾರೆ. ನವಾಬ್ ಮಲಿಕ್ ಕೂಡ ಈ ಕಂಪನಿಯೊಂದಿಗೆ ಕೆಲಕಾಲ ಸಂಬಂಧ ಹೊಂದಿದ್ದರು. ಕುರ್ಲಾದ ಎಲ್ ಬಿಎಸ್ ರಸ್ತೆಯಲ್ಲಿ 3 ಎಕರೆ ಜಮೀನು ಕೇವಲ 20-30 ಲಕ್ಷಕ್ಕೆ ಮಾರಾಟವಾಗಿದ್ದರೆ, ಅದರ ಮಾರುಕಟ್ಟೆ ದರ 3.50 ಕೋಟಿಗೂ ಹೆಚ್ಚಾಗಿದೆ. ಮುಂಬೈನ ಇಂತಹ ಕ್ರಿಮಿನಲ್‌ಗಳಿಂದ ಏಕೆ ಭೂಮಿ ಖರೀದಿಸಿದ್ದೀರಿ ಎಂದು ದೇವೇಂದ್ರ ಫಡ್ನವಿಸ್ ಅವರು ಪ್ರಶ್ನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com