ದೇವೇಂದ್ರ ಫಡ್ನವಿಸ್ ಮತ್ತು ಸಮೀರ್ ವಾಂಖೆಡೆ ಸೇರಿಕೊಂಡು ಮಹಾರಾಷ್ಟ್ರದಲ್ಲಿ ಕ್ರಿಮಿನಲ್ ಗಳನ್ನು ಬೆಳೆಸಿದರು: ಸಚಿವ ನವಾಬ್ ಮಲಿಕ್
ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ಮತ್ತೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ನಿನ್ನೆ ದೇವೇಂದ್ರ ಫಡ್ನವಿಸ್ ಗೆ ಡಿ ಗ್ಯಾಂಗ್ ಜೊತೆ ಭೂಗತ ಲೋಕದ ಸಂಪರ್ಕವಿದೆ ಎಂದು ಆರೋಪಿಸಿದ್ದ ನವಾಬ್ ಮಲಿಕ್ ಇಂದು ಹೊಸ ಆರೋಪ ಮಾಡಿದ್ದಾರೆ.
Published: 10th November 2021 01:25 PM | Last Updated: 10th November 2021 02:05 PM | A+A A-

ನವಾಬ್ ಮಲಿಕ್
ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ಮತ್ತೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ನಿನ್ನೆ ದೇವೇಂದ್ರ ಫಡ್ನವಿಸ್ ಗೆ ಡಿ ಗ್ಯಾಂಗ್ ಜೊತೆ ಭೂಗತ ಲೋಕದ ಸಂಪರ್ಕವಿದೆ ಎಂದು ಆರೋಪಿಸಿದ್ದ ನವಾಬ್ ಮಲಿಕ್ ಇಂದು ಹೊಸ ಆರೋಪ ಮಾಡಿದ್ದಾರೆ.
ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿಯಾಗಿದ್ದಾಗ ವಶಪಡಿಸಿಕೊಳ್ಳಲಾಗಿದ್ದ ನಕಲಿ ನೋಟುಗಳನ್ನು ಬಹಿರಂಗಪಡಿಸದೆ ಕೇಸನ್ನು ಮುಚ್ಚಿಹಾಕಿದ್ದು ಮಾತ್ರವಲ್ಲದೆ ಸರ್ಕಾರದ ನಿಗಮ ಮಂಡಳಿಗಳಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದವರನ್ನು ನೇಮಕ ಮಾಡುವ ಮೂಲಕ ರಾಜಕೀಯವನ್ನು ಅಪರಾಧೀಕರಣಗೊಳಿಸಿದ್ದರು ಎಂದು ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ದೇವೇಂದ್ರ ಫಡ್ನವಿಸ್ ವಿರುದ್ಧ ಆರೋಪವನ್ನು ಮುಂದುವರಿಸಿದ ಮಲಿಕ್, ಮುಂದಿನ ದಿನಗಳಲ್ಲಿ ಇನ್ನಷ್ಟು ಬಾಂಬ್ ಗಳನ್ನು ಸಿಡಿಸುತ್ತೇನೆ, ಇದು ಬಿಜೆಪಿಯ ವಿರುದ್ಧ ಅಸ್ತ್ರವಾಗುತ್ತದೆ ಎಂದಿದ್ದಾರೆ.
ನಿನ್ನೆ ಆರೋಪ ಮಾಡಿದ್ದ ನವಾಬ್ ಮಲಿಕ್ ನಾಳೆ ಹೈಡ್ರೋಜನ್ ಬಾಂಬ್ ನ್ನು ಸಿಡಿಸಲಿದ್ದು ಫಡ್ನವಿಸ್ ಅವರ ಭೂಗತ ಲೋಕದ ನಂಟನ್ನು ಬಿಚ್ಚಿಡುತ್ತೇನೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ದೇವೇಂದ್ರ ಫಡ್ನವಿಸ್ ನವಾಬ್ ಮಲಿಕ್ ಮತ್ತು ಅವರ ಕುಟುಂಬ ಸದಸ್ಯರು ಹಾಗೂ 1993ರ ಮುಂಬೈ ಸರಣಿ ಸ್ಫೋಟ ಕೇಸಿನ ಇಬ್ಬರು ಅಪರಾಧಿಗಳು ಅಕ್ರಮ ಭೂ ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ ಎಂದಿದ್ದರು. ಆದರೆ ಈ ಆರೋಪವನ್ನು ನವಾಬ್ ಮಲಿಕ್ ತಳ್ಳಿಹಾಕಿದ್ದಾರೆ.
ಇಂದು ನವಾಬ್ ಮಲಿಕ್ ಮಾಡಿರುವ ಆರೋಪ: ನವೆಂಬರ್ 8, 2016ರಲ್ಲಿ ಅಧಿಕ ಮೌಲ್ಯದ ನೋಟು ಅನಾಣ್ಯೀಕರಣವಾದ ನಂತರ ಬೇರೆಲ್ಲಾ ರಾಜ್ಯಗಳಲ್ಲಿ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದರೆ ಮಹಾರಾಷ್ಟ್ರದಲ್ಲಿ ಒಂದೇ ಒಂದು ಕೇಸು ವರದಿಯಾಗಿರಲಿಲ್ಲ. ಆಗ ದೇವೇಂದ್ರ ಫಡ್ನವಿಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 2017ರ ಅಕ್ಟೋಬರ್ 8ರಂದು ಕಂದಾಯ ಗುಪ್ತಚರ ಇಲಾಖೆ 14.56 ಕೋಟಿ ರೂಪಾಯಿ ನಕಲಿ ನೋಟುಗಳನ್ನು ಬಾಂದ್ರಾ ಕುರ್ಲ ಕಾಂಪ್ಲೆಕ್ಸ್ ನಲ್ಲಿ ವಶಪಡಿಸಿಕೊಂಡಿತ್ತು. ಆದರೆ ಕೇಸನ್ನು ಮುಚ್ಚಿಹಾಕಲು ದೇವೇಂದ್ರ ಫಡ್ನವಿಸ್ ಸಹಾಯ ಮಾಡಿದ್ದರು. ವಶಪಡಿಸಿಕೊಂಡ ನಕಲಿ ನೋಟುಗಳು ಕೇವಲ 8.8 ಲಕ್ಷ ರೂಪಾಯಿಗಳು ಎಂದು ತೋರಿಸಲಾಗಿತ್ತು. ಆ ಕೇಸನ್ನು ಏಕೆ ಆಗ ರಾಷ್ಟ್ರೀಯ ತನಿಖಾ ತಂಡಕ್ಕೆ ವರ್ಗಾಯಿಸಿರಲಿಲ್ಲ ಎಂದು ಮಲಿಕ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಡಿ-ಗ್ಯಾಂಗ್ ಜತೆ ಫಡ್ನವಿಸ್ ಭೂಗತ ನಂಟು ನಾಳೆ ಬಹಿರಂಗ: ನವಾಬ್ ಮಲಿಕ್ ತಿರುಗೇಟು
ಆಗ ಸಮೀರ್ ವಾಂಖೆಡೆ ಕಂದಾಯ ಗುಪ್ತಚರ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದರು. ಇಮ್ರಾನ್ ಅಲಮ್ ಶೇಖ್ ಎಂಬುವವನ ಬಂಧನವಾಗಿತ್ತು ಆ ಸಮಯದಲ್ಲಿ. ನಂತರ ಆತನ ಸೋದರ ಹಾಜಿ ಅರ್ಫತ್ ಶೇಖ್ ನನ್ನು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷನನ್ನಾಗಿ ನೇಮಿಸಲಾಯಿತು ಎಂದು ಮಲಿಕ್ ಇಂದು ಹೇಳಿದ್ದಾರೆ.
ಆ ಸಮಯದಲ್ಲಿ ದೇವೇಂದ್ರ ಫಡ್ನವಿಸ್ ಅವರು ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ನಿಗಮ ಮಂಡಳಿಗೆ ನೇಮಿಸುತ್ತಿದ್ದರು. ನಾಗ್ಪುರದ ಮುನ್ನಾ ಯಾದವ್ ಎಂಬುವವರನ್ನು ಮಹಾರಾಷ್ಟ್ರ ನಿರ್ಮಾಣ ಕಾರ್ಮಿಕರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷನನ್ನಾಗಿ ನೇಮಿಸಲಾಗಿತ್ತು. ಈತ ಕೂಡ ಕೊಲೆ ಆರೋಪ ಎದುರಿಸುತ್ತಿದ್ದನು. ಬಾಂಗ್ಲಾದೇಶಿ ಪ್ರಜೆಯೊಬ್ಬನನ್ನು ಎರಡನೇ ಪತ್ನಿ ಮಾಡಿಕೊಂಡಿದ್ದ ವ್ಯಕ್ತಿಗೆ ಫಡ್ನವಿಸ್ ಆಶ್ರಯ ಕೊಟ್ಟಿದ್ದರು ಎಂದು ಸಹ ಸಚಿವ ಮಲಿಕ್ ಆರೋಪಿಸಿದ್ದಾರೆ.
ಭೂಗತ ಲೋಕದ ನಂಟಿನ ಬಗ್ಗೆ ಫಡ್ನವಿಸ್ ಮತ್ತು ಮಲಿಕ್ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಇಬ್ಬರೂ ಭೂಗತ ಲೋಕದ ನಂಟನ್ನು ನಿರಾಕರಿಸಿದ್ದಾರೆ.