ತಮಿಳು ನಾಡು ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮತ್ತಷ್ಟು ಅವ್ಯಾಹತ ಮಳೆ, ರೆಡ್ ಅಲರ್ಟ್ ಘೋಷಣೆ 

ತಮಿಳು ನಾಡು ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅವ್ಯಾಹತ ಮಳೆಯಾಗಿ ಸಾಕಷ್ಟು ಹಾನಿಯುಂಟಾಗಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಇನ್ನಷ್ಟು ಮಳೆ ಸುರಿಯುವ ಸಾಧ್ಯತೆಯಿರುವುದರಿಂದ ರಾಜ್ಯ ಮತ್ತಷ್ಟು ಆಪತ್ತಿಗೆ ಒಡ್ಡಿಕೊಳ್ಳುವ ಸಾಧ್ಯತೆಯಿದೆ.
ತಮಿಳು ನಾಡಿನಲ್ಲಿ ಮಳೆಗೆ ರಸ್ತೆಯಲ್ಲುಂಟಾಗಿರುವ ಪರಿಸ್ಥಿತಿ
ತಮಿಳು ನಾಡಿನಲ್ಲಿ ಮಳೆಗೆ ರಸ್ತೆಯಲ್ಲುಂಟಾಗಿರುವ ಪರಿಸ್ಥಿತಿ

ಚೆನ್ನೈ: ತಮಿಳು ನಾಡು ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅವ್ಯಾಹತ ಮಳೆಯಾಗಿ ಸಾಕಷ್ಟು ಹಾನಿಯುಂಟಾಗಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಇನ್ನಷ್ಟು ಮಳೆ ಸುರಿಯುವ ಸಾಧ್ಯತೆಯಿರುವುದರಿಂದ ರಾಜ್ಯ ಮತ್ತಷ್ಟು ಆಪತ್ತಿಗೆ ಒಡ್ಡಿಕೊಳ್ಳುವ ಸಾಧ್ಯತೆಯಿದೆ.

ಮಳೆ ಸಂಬಂಧಿ ಅನಾಹುತಗಳಿಗೆ ಇದುವರೆಗೆ 5 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ತಗ್ಗು ಪ್ರದೇಶಗಳಲ್ಲಿ ತುಂಬಿದ್ದ ನೀರನ್ನು ಹೊರಹಾಕುವ ಕೆಲಸ ಮಾಡಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ, ಸೇವೆ, ಅಗ್ನಿ ಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಸಚಿವ ಕೆಕೆಎಸ್ ಎಸ್ ಆರ್ ರಾಮಚಂದ್ರನ್ ತಿಳಿಸಿದ್ದಾರೆ.

ರಾಜ್ಯದ 14 ಜಿಲ್ಲೆಗಳಲ್ಲಿ ಅವ್ಯಾಹತ ಮಳೆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಗ್ನೇಯ ಮತ್ತು ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಬಲದಿಂದ ವಾಯುಭಾರ ಕುಸಿತ ಉಂಟಾಗಲಿದ್ದು, ಮುಂದಿನ 36 ಗಂಟೆಗಳಲ್ಲಿ ಉತ್ತರ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಇದರ ಪ್ರಭಾವದಿಂದ ಮುಂದಿನ 24 ಗಂಟೆಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ನೆರೆಹೊರೆಯಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳುವ ಸಾಧ್ಯತೆಯಿದೆ. ಇದು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ, ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ. ನವೆಂಬರ್ 11 ರ ಮುಂಜಾನೆ ಉತ್ತರ ತಮಿಳುನಾಡು ಕರಾವಳಿಯನ್ನು ತಲುಪಿ ರಾಜ್ಯದ ಹಲವಾರು ಪ್ರದೇಶಗಳಲ್ಲಿ ವ್ಯಾಪಕ ಮಳೆಯನ್ನು ತರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ರೆಡ್ ಅಲರ್ಟ್ ಘೋಷಣೆ: ಮುಂದಿನ ಐದು ದಿನಗಳಲ್ಲಿ ತಮಿಳುನಾಡು, ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ಕೇರಳದಾದ್ಯಂತ ತಕ್ಕಮಟ್ಟಿಗೆ ವ್ಯಾಪಕವಾಗಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ ಪುದುಕ್ಕೊಟ್ಟೈ, ರಾಮನಾಥಪುರಂ, ಕಾರೈಕಲ್‌ಗೆ ರೆಡ್ ಅಲರ್ಟ್ ಘೋಷಿಸಿದೆ. ಅದೇ ರೀತಿ ಇಂದು ಕಡಲೂರು, ವಿಲುಪುರಂ, ಶಿವಗಂಗಾ, ರಾಮನಾಥಪುರಂ ಮತ್ತು ಕಾರೈಕಲ್‌ಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ.

ನಾಳೆ ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ವಿಲುಪುರಂ ಮತ್ತು ತಿರುವಣ್ಣಾಮಲೈಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಮಧ್ಯೆ, ತಮಿಳುನಾಡು, ಆಂಧ್ರಪ್ರದೇಶ ಮತ್ತು ದಕ್ಷಿಣ ಲಂಕಾ ಕರಾವಳಿಯ ಕಡೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com