ರಾಜಸ್ಥಾನ ಸಂಪುಟ ಪುನಾರಚನೆ ಝೇಂಕಾರದ ನಡುವೆ ಸೋನಿಯಾ ಗಾಂಧಿ ಭೇಟಿ ಮಾಡಿದ ಸಚಿನ್ ಪೈಲಟ್
ರಾಜಸ್ಥಾನದಲ್ಲಿ ಸಚಿವ ಸಂಪುಟ ಪುನಾರಚನೆ ಮತ್ತು ಪಕ್ಷ ಸಂಘಟನೆ ಪುನಶ್ಚೇತನ ಕುರಿತ ಊಹಾಪೋಹಗಳ ನಡುವೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಶುಕ್ರವಾರ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.
Published: 12th November 2021 03:47 PM | Last Updated: 12th November 2021 03:47 PM | A+A A-

ಸಚಿನ್ ಪೈಲಟ್
ನವದೆಹಲಿ: ರಾಜಸ್ಥಾನದಲ್ಲಿ ಸಚಿವ ಸಂಪುಟ ಪುನಾರಚನೆ ಮತ್ತು ಪಕ್ಷ ಸಂಘಟನೆ ಪುನಶ್ಚೇತನ ಕುರಿತ ಊಹಾಪೋಹಗಳ ನಡುವೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಶುಕ್ರವಾರ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಮಾರನೇ ದಿನವೇ ಸಚಿನ್ ಪೈಲಟ್ ಅವರು ಕಾಂಗ್ರೆಸ್ ಅಧ್ಯಕ್ಷೆಯನ್ನು ಭೇಟಿ ಮಾಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಇಬ್ಬರು ನಾಯಕರು ರಾಜಕೀಯ ಪರಿಸ್ಥಿತಿ ಮತ್ತು ರಾಜ್ಯದಲ್ಲಿ ಮುಂಬರುವ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸೋನಿಯಾ ಗಾಂಧಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೈಲಟ್, "ಕಾಂಗ್ರೆಸ್ ಪಕ್ಷವು ನಾನು ಏನು ಮಾಡಬೇಕೆಂದು ಬಯಸುತ್ತದೆಯೋ ಅದನ್ನು ಸಂತೋಷದಿಂದ ನಾಡುತ್ತೇನೆ. ಕಳೆದ 20 ವರ್ಷಗಳಲ್ಲಿ, ಯಾವುದೇ ಕೆಲಸವನ್ನು ಕೊಟ್ಟರೂ ಅದನ್ನು ಶ್ರದ್ಧೆಯಿಂದ ಮಾಡಿದ್ದೇನೆ ಮತ್ತು ಈಗಲೂ ಮಾಡುತ್ತೇನೆ ಎಂದಿದ್ದಾರೆ.
"ಶ್ರೀಮತಿ ಗಾಂಧಿಯವರು ನಮ್ಮೆಲ್ಲರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಂಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಸರಿಯಾದ ಸಮಯದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಅವರು ರಾಜಸ್ಥಾನದ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ" ಎಂದು ಮಾಜಿ ಉಪಮುಖ್ಯಮಂತ್ರಿ ಹೇಳಿದ್ದಾರೆ.
ಮುಂದಿನ ಕೆಲವು ದಿನಗಳಲ್ಲಿ ರಾಜಸ್ಥಾನದಲ್ಲಿ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ಇದ್ದು, ಸಚಿವ ಸ್ಥಾನ ನೀಡುವಾಗ "ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ" ಸೂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ವಿವಿಧ ವಿಧಾನಗಳನ್ನು ರೂಪಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.